Advertisement

Mangaluru; ಚೀನಕ್ಕೆ ಕಬ್ಬಿಣ ಬೇಡ ; ದರವೂ ಇಳಿತ; ಕೆಐಒಸಿಎಲ್‌ ಚಟುವಟಿಕೆ ತಾತ್ಕಾಲಿಕ ಸ್ಥಗಿತ

01:02 AM Aug 14, 2024 | Team Udayavani |

ಮಂಗಳೂರು: ಅಂತಾ ರಾಷ್ಟ್ರೀಯ ಮಾರುಕಟ್ಟೆ ಕುಸಿತ ಒಂದೆಡೆ ಹಾಗೂ ಸ್ವಂತ ಗಣಿ ಇಲ್ಲದ ಕಾರಣ ಕಬ್ಬಿಣದ ಉಂಡೆಗಳನ್ನು ರಫ್ತು ಮಾಡುವ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ (ಕೆಐಒಸಿಎಲ್‌) ಐದು ತಿಂಗಳುಗಳಿಂದ ಸ್ಥಗಿತಗೊಂಡಿದೆ.

Advertisement

ಕುದು ರೆಮುಖದಲ್ಲಿ ಗಣಿಗಾರಿಕೆ ನಿಂತ ಬಳಿಕ ಕಂಪೆನಿ ಹೊರರಾಜ್ಯಗಳಿಂದ ಕಬ್ಬಿಣದ ಅದಿರನ್ನು ತರಿಸಿಕೊಂಡು ಕೂಳೂರಿನಲ್ಲಿರುವ ತನ್ನ ಸ್ಥಾವರದಲ್ಲಿ ಸಂಸ್ಕರಿಸಿ, ಉಂಡೆಗಟ್ಟಿ ಅದನ್ನು ವಿದೇಶಗಳಿಗೆ ರಫ್ತು ಮಾಡುತ್ತಿತ್ತು. ಈಗ ಆ ವ್ಯವಹಾರವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

2006ರಿಂದೀಚೆಗೆ ಎನ್‌ಎಂಡಿಸಿಯಂತಹ ಸಾರ್ವಜನಿಕ ವಲಯದ ಗಣಿ ಸಂಸ್ಥೆಯಿಂದ ಅದಿರನ್ನು ಹಡಗು, ರೈಲಿನಲ್ಲಿ ತರಿಸಿಕೊಂಡು ಕೆಐಒಸಿಎಲ್‌ ಕಾರ್ಯ ನಿರ್ವಹಿಸುತ್ತಿತ್ತು. ಇದಲ್ಲದೆ, ಹೊರರಾಜ್ಯಗಳಿಂದ ಅದಿರು ಖರೀದಿ, ಅದರ ಸಾಗಣೆ ಹಾಗೂ ಉತ್ಪಾದನೆ ವೆಚ್ಚವೆಲ್ಲವೂ ಸೇರಿಕೊಂಡು ಕಬ್ಬಿಣದ ಉಂಡೆಯ ಉತ್ಪಾದನ ವೆಚ್ಚ ಹೆಚ್ಚುತ್ತಿತ್ತು. ಆದರೆ ವಿದೇಶದಲ್ಲಿ ಉತ್ತಮ ದರ ಸಿಗುತ್ತಿದ್ದ ಹಿನ್ನೆಲೆಯಲ್ಲಿ ನಿರ್ವಹಣೆ ನಡೆಯುತ್ತಿತ್ತು. ಆದರೆ ಕೆಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಡೆಕಬ್ಬಿಣದ ದರ ಕುಸಿದಿದೆ. ಇದೇ ದರದಲ್ಲಿ ರಫ್ತು ವ್ಯವಹಾರ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಂಪೆನಿ ತನ್ನ ಕಾರ್ಯವನ್ನು ಸದ್ಯ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಕಂಪೆನಿಯ ಬೆಂಗಳೂರು ಹಾಗೂ ಮಂಗಳೂರಿನ ಕಚೇರಿ, ಕಾರ್ಖಾನೆ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 500 ಗುತ್ತಿಗೆ ಆಧಾರದ ಕಾರ್ಮಿಕರೂ ಸಹಿತ 1000 ಮಂದಿ ಸಿಬಂದಿಯ ಭವಿಷ್ಯವೂ ಆತಂಕಕ್ಕೆ ಸಿಲುಕಿದಂತಾಗಿದೆ.

ಚೀನದಲ್ಲಿ ಬೇಡಿಕೆ ಕುಸಿತ
ಚೀನ ಜಗತ್ತಿನ ಅತಿ ಹೆಚ್ಚು ಕಬ್ಬಿಣದ ಅದಿರು ಆಮದು ಮಾಡಿಕೊಳ್ಳುವ ದೇಶ ವಾಗಿದ್ದು, ಹಲವಾರು ಉಕ್ಕು ಕಾರ್ಖಾನೆಗಳು ಕಾರ್ಯ ನಿರ್ವ ಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ದಿಂದಲೂ ಉಂಡೆಕಬ್ಬಿಣವನ್ನು ಚೀನಕ್ಕೆ ರಫ್ತು ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಹಲವು ದೇಶಗಳಿಂದ ಬೃಹತ್‌ ಪ್ರಮಾಣದಲ್ಲಿ ಅದಿರು ಪೂರೈಸುತ್ತಿದ್ದರೂ ಜಾಗತಿಕವಾಗಿ ಉಕ್ಕಿನ
ಬೇಡಿಕೆ ಕುಸಿದಿರುವ ಕಾರಣ ಚೀನದ ಕಂಪೆನಿಗಳೂ ಉತ್ಪಾದನೆಯನ್ನು ಇಳಿಸಿವೆ. ಇದರ ಪರಿಣಾಮವಾಗಿ ಉಂಡೆ ಕಬ್ಬಿಣದ ದರವೂ ಕುಸಿದಿದೆ.6 ತಿಂಗಳ ಹಿಂದೆ ಪ್ರತಿ ಟನ್‌ಗೆ ಸರಾಸರಿ 140 ಡಾಲರ್‌ನಷ್ಟಿದ್ದರೆ ಈಗ 102 ಡಾಲರ್‌ಗೆ ಇಳಿದಿದೆ.

Advertisement

ಆದರೆ 135 ಡಾಲರ್‌ಗಿಂತ ಹೆಚ್ಚಿನ ದರ ಸಿಕ್ಕಿದರೆ ಮಾತ್ರ ಕೆಐಒಸಿಎಲ್‌ ಕಂಪೆನಿಗೆ ಅನುಕೂಲವಾಗಲಿದೆ. ಆದರೆ ಅಷ್ಟೊಂದು ಸಿಗುತ್ತಿಲ್ಲ. ಹಾಗಾಗಿ ಸ್ಥಾವರದ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಿದೆ ಎನ್ನುತ್ತವೆ ಮೂಲಗಳು.

ಸ್ವಂತ ಗಣಿ ಇಲ್ಲದೆ ಸಂಕಷ್ಟ
ಕೆಲವು ವರ್ಷಗಳಿಂದ ಕೆಐಒಸಿಎಲ್‌ ಬಳ್ಳಾರಿಯ ದೇವದಾರಿಯಲ್ಲಿ ಗಣಿಯನ್ನು ಪಡೆಯಲು ಪ್ರಯತ್ನ ನಡೆಸುತ್ತಿದೆ. 404 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆಗೆ ಸುಮಾರು 300 ಕೋಟಿ ರೂ. ಮೊತ್ತ
ವನ್ನೂ ಪಾವತಿಸಿದೆ. ಕೇಂದ್ರ ಪರಿಸರ ಇಲಾಖೆಯೂ ಅನುಮತಿಸಿದ್ದು, ಭೂಮಿ ಹಸ್ತಾಂತರವಾಗಬೇಕಿದೆ.

ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕೆ ಸಚಿವ ಖಾತೆ ಪಡೆದ ಬಳಿಕ ಯೋಜನೆಗೆ ಸಹಿ ಹಾಕಿದ್ದರು. ಆದರೆ ಅರಣ್ಯ ಭೂಮಿಯನ್ನು ಗಣಿಗೆ ಹಸ್ತಾಂತರಿಸುವ ಬಗ್ಗೆ ಅಪಸ್ವರ ಬಂದ ಕೇಳಿ ಬಂದಿತ್ತು.
ಈಗ ಕೆಐಒಸಿಎಲ್‌ನ ಮುಂದಿನ ಆಯ್ಕೆ ಏನೆಂಬುದನ್ನು ಕಾದು ನೋಡಬೇಕಿದೆ.

ಕಳೆದ 7 ತಿಂಗಳಲ್ಲಿ
ಉಂಡೆಕಬ್ಬಿಣದ ಬೆಲೆ
ಜನವರಿ – 136 ಡಾಲರ್‌
ಫೆಬ್ರವರಿ- 125 ಡಾಲರ್‌
ಮಾರ್ಚ್‌- 110 ಡಾಲರ್‌
ಎಪ್ರಿಲ್‌ 112 ಡಾಲರ್‌
ಮೇ – 119 ಡಾಲರ್‌
ಜೂನ್‌-108 ಡಾಲರ್‌
ಜುಲೈ-95 ಡಾಲರ್‌

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next