ಚೆನ್ನೈ: ವಿತ್ತೀಯ ಸಂಕಷ್ಟಕ್ಕೆ ಒಳಗಾಗಿರುವ ಶ್ರೀಲಂಕಾದ ಮೂಲಕ ಚೀನ ಸರ್ಕಾರ ಭಾರತದ ಮೇಲೆ ಗೂಢಚರ್ಯೆ ನಡೆಸಲು ಮುಂದಾಗಿದೆಯೇ ಎಂಬ ಸಂಶಯದ ಸುಳಿಗಳು ಎದ್ದಿವೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ದ್ವೀಪ ರಾಷ್ಟ್ರದ ಹಂಬಂತೋಟ ಬಂದರಿನಲ್ಲಿ ಲಂಗರು ಹಾಕಿರುವ ಚೀನದ “ಯುವಾನ್ ವಾಂಗ್5′ ಎಂಬ ಹಡಗೇ ಇಂಥ ಅನುಮಾನಕ್ಕೆ ಕಾರಣ.
ಅತ್ಯಾಧುನಿಕ ವ್ಯವಸ್ಥೆ, ಶಸ್ತ್ರಾಸ್ತ್ರಗಳನ್ನು ಒಳಗೊಂಡ ಈ ಹಡಗು ಉಪಗ್ರಹಗಳ ಚಲನವಲನಗಳ ಮೇಲೆ ನಿಗಾ, ಆಧುನಿಕ ಕ್ಷಿಪಣಿಗಳನ್ನು ಎದುರಿಸುವಂಥ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಕೇರಳ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಭಾರತೀಯ ಸೇನೆಯ ಮೂರು ವಿಭಾಗಗಳ ವ್ಯೂಹಾತ್ಮಕ ಕೇಂದ್ರಗಳು ಇವೆ. ಅವುಗಳಲ್ಲಿ ಸಿದ್ಧವಾಗುತ್ತಿರುವ ರಕ್ಷಣಾ ರಹಸ್ಯಗಳ ಮೇಲೆ ಚೀನ ಕಣ್ಣು ಇರಿಸಿದೆಯೇ ಎಂಬ ಸಂದೇಹವೂ ಉಂಟಾಗಿದೆ. ಇಷ್ಟು ಮಾತ್ರವಲ್ಲದೆ, ಆರು ಪ್ರಮುಖ ಬಂದರು ಕೇಂದ್ರಗಳೂ ದಕ್ಷಿಣ ಭಾರತದಲ್ಲಿವೆ.
ಈ ಹಡಗು ಹೆಚ್ಚಿನ ಪ್ರಮಾಣದಲ್ಲಿ ತಾಂತ್ರಿಕವಾಗಿ ಶಕ್ತಿಶಾಲಿಯಾಗಿದೆ. ವರದಿಗಳ ಪ್ರಕಾರ ಹಂಬಂತೋಟ ಬಂದರನ್ನು ಕೇಂದ್ರೀಕರಿಸಿ 750 ಕಿಮೀ ದೂರದ ಪ್ರದೇಶದಲ್ಲಿರುವ ದೇಶದ ಸ್ಥಳಗಳಲ್ಲಿರುವ ವ್ಯೂಹಾತ್ಮಕ ಕೇಂದ್ರಗಳು ಅಂದರೆ, ಕಲಪ್ಪಾಕಂ, ಕೂಡಂಕುಳಂನಥ ಪ್ರಮುಖ ಅಣು ವಿದ್ಯುತ್ ಕೇಂದ್ರಗಳಲ್ಲಿನ ಮಾಹಿತಿ ಸಂಗ್ರಹಿಸಲೂ ಅದು ಶಕ್ತವಾಗಿದೆ.
ಚೀನದಿಂದ ಪಡೆದಿರುವ ಸಾಲ ಮರು ಪಾವತಿ ಸಾಧ್ಯವಾಗದೇ ಇದ್ದಾಗ ಹಂಬಂತೋಟ ಬಂದರನ್ನು ಚೀನಾದ ಮರ್ಚೆಂಟ್ ಪೋರ್ಟ್ ಹೋಲ್ಡಿಂಗ್ಸ್‌ಗೆ ನೀಡಲಾಗಿತ್ತು.
ಹೀಗಾಗಿ, ಆ ಪ್ರದೇಶದಲ್ಲಿ ಚೀನಾದ ಹಡಗು ಅಲ್ಲಿ ಆ.17ರ ವರೆಗೆ ಲಂಗರು ಹಾಕಿರಲಿದೆ. ಈ ಅಂಶವನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯವೂ ಖಚಿತಪಡಿಸಿದೆ.