Advertisement

ಕೋವಿಡ್ : ಮಾನವೀಯತೆಯ ಮೇಲೆ ಕ್ರೌರ್ಯ ಬೇಡ

12:06 AM Nov 29, 2022 | Team Udayavani |

ಝೀರೋ ಕೋವಿಡ್‌ ಹೆಸರಲ್ಲಿ ಚೀನ, ತನ್ನ ನಾಗರಿಕರ ಮೇಲೆ ಕ್ರೌರ್ಯ ಮೆರೆಯುತ್ತಿದ್ದು, ಬೆಂಕಿ ದುರಂತದಿಂದ 10 ಮಂದಿ ಸಾವನ್ನಪ್ಪಲು ಸರಕಾರವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. 2019ರ ಡಿಸೆಂಬರ್‌ನಿಂದಲೂ ಚೀನದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಆಗಿನಿಂದಲೂ ಝೀರೋ ಕೋವಿಡ್‌ ಹೆಸರಲ್ಲಿ ಪದೇ ಪದೆ ನಿರ್ಬಂಧ ಹೇರುತ್ತಿದೆ. ವಿಚಿತ್ರವೆಂದರೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇಡೀ ಜಗತ್ತೇ ಕೊರೊನಾ ಹಿಮ್ಮೆಟ್ಟಿಸಿ ದೃಢವಾಗಿ ನಿಂತಿದ್ದರೆ ಚೀನ ಮಾತ್ರ ಕೊರೊನಾ ಹೆಸರಲ್ಲಿ ಇನ್ನೂ ಹುಚ್ಚುತನದ ತೀರ್ಮಾನಗಳನ್ನೇ ತೆಗೆದುಕೊಳ್ಳುತ್ತಿದೆ. ಇದು ಒಂದು ರೀತಿಯಲ್ಲಿ ಹೊರಜಗತ್ತಿಗೆ ತೀರಾ ವಿಚಿತ್ರವಾಗಿ ಕಾಣಿಸುತ್ತಿದೆ.

Advertisement

ಕಳೆದ ಗುರುವಾರ ಉರುಂಖೀ ಎಂಬಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬೆಂಕಿ ಬಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿ ಕೊರೊನಾದಿಂದಾಗಿ ಲಾಕ್‌ಡೌನ್‌ ಹಾಕಲಾಗಿದ್ದು, ಬೆಂಕಿಯ ಕೆನ್ನಾಲಿಗೆಯಿಂದ ಜನರನ್ನು ರಕ್ಷಿಸುವ ಕೆಲಸವೂ ಆಗಿಲ್ಲ. ಜತೆಗೆ ಅಪಾರ್ಟ್‌ಮೆಂಟ್‌ನೊಳಗೆ ಇದ್ದವರನ್ನು ಹೊರಗೆ ಬರಲೂ ಬಿಟ್ಟಿಲ್ಲ. ಎಷ್ಟೋ ಅಪಾರ್ಟ್‌ಮೆಂಟ್‌ಗಳಿಗೆ ಹೊರಗಿನಿಂದ ತಂತಿ ಬಳಸಿ ಬಾಗಿಲು ಕಟ್ಟಲಾಗಿದ್ದು, ಬಹುತೇಕ ಮಂದಿ ಒಳಗೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಿದೆ ಎಂಬುದು ಜನರ ಆರೋಪ.  ಹೀಗಾಗಿಯೇ ಬೀಜಿಂಗ್‌, ಶಾಂಘೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಯ ಕಾಳಿYಟ್ಟು ಹಬ್ಬಿದೆ. ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ರಾಜೀನಾಮೆಗೆ ಜನ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ಖಾಲಿ ಪೇಪರ್‌ ಹಿಡಿದು ಪ್ರತಿಭಟನೆ ಮಾಡುತ್ತಾ ಸರಕಾರವೂ ಕೆಳಗಿಳಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ಎಲ್ಲ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಚೀನ ಸರಕಾರ ಮಾಡುತ್ತಿದೆ. ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುವಂಥ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳನ್ನು ಸೆನ್ಸಾರ್‌ ಮಾಡಿ ಡಿಲೀಟ್‌ ಮಾಡಲಾಗುತ್ತಿದೆ. ವರದಿಗೆಂದು ಹೋಗಿದ್ದ ಅಂತಾರಾಷ್ಟ್ರೀಯ ಪತ್ರಕರ್ತರೊಬ್ಬರ ಮೇಲೆ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ. ಒಟ್ಟಾರೆಯಾಗಿ ಜನರ ಪ್ರತಿಭಟ ನೆಯಿಂದಾಗಿ ಅಲ್ಲಿನ ಸರಕಾರ ಕಂಗೆಟ್ಟಿರುವುದು ಸತ್ಯ.  ಇಡೀ ಜಗತ್ತು ನಂಬಿರುವ ಹಾಗೆ ಕೊರೊನಾ ಮೊದಲು ಹುಟ್ಟಿಕೊಂಡಿದ್ದೇ ಚೀನದಲ್ಲಿ. ಹಾಗೆಯೇ ಬೇರೆ ಎಲ್ಲ ದೇಶಗಳಿಗಿಂತ ಮೊದಲು ಮಕ್ಕಳನ್ನು ಹೊರತುಪಡಿಸಿ, ಎಲ್ಲರಿಗೂ ಲಸಿಕೆ ನೀಡಿದ ಮೊದಲ ದೇಶವೂ ಚೀನವೇ. ಆದರೂ ಕೊರೊನಾ ಎಂದರೆ ಇನ್ನೂ ಏಕೆ ಹೆದರಿಕೆ ಎಂಬುದೇ ಹೊರಗಿನ ದೇಶಗಳಿಗೆ ಅರ್ಥವಾಗುತ್ತಿಲ್ಲ.

ಭಾರತದಲ್ಲಿ ಈಗಾಗಲೇ ಕೊರೊನಾ ಗೆದ್ದಿರುವ ರೀತಿಯಲ್ಲೇ ಜನರು ವರ್ತನೆ ಮಾಡುತ್ತಿದ್ದಾರೆ. ಇದು ಕೇವಲ ಭಾರತಕ್ಕಷ್ಟೇ ಅಲ್ಲ, ಜಗತ್ತಿನ ಎಲ್ಲ ದೇಶಗಳೂ ಕೊರೊನಾದ ಸುಳಿಯಿಂದ ಹೊರಗೆ ಬಂದಿವೆ. ಜನ ಕೊರೊನಾಗೆ ತೆರೆದುಕೊಂಡಿದ್ದರಿಂದಲೇ ಎಲ್ಲರಿಗೂ ಅದು ಬಂದು ಹೋಗಿದೆ. ಹೀಗಾಗಿ ಜನರಲ್ಲಿ ಕೊರೊನಾ ವಿರುದ್ಧ ಹೋರಾಡುವ ಶಕ್ತಿಯೂ ಬಂದಿದೆ. ಆದರೆ ಚೀನದಲ್ಲಿ ಝೀರೋ ಕೋವಿಡ್‌ ನೀತಿಯಿಂದಾಗಿ ಜನರಿಗೆ ಕೊರೊನಾ ಬರಲು ಬಿಡುತ್ತಿಲ್ಲ. ಇದನ್ನು ಬಿಟ್ಟು ಮನೆಯಲ್ಲಿಯೇ ಕೂಡಿಹಾಕಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕಾರ್ಖಾನೆಗಳಲ್ಲೇ ವಸತಿ ನಿಲಯಗಳನ್ನು ರೂಪಿಸಿ, ಅಲ್ಲೇ ಇರಿಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಇದರಿಂದಾಗಿ ಜನ ಮನೆಗೂ ಬರಲಾರದ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿಯೇ ಅಲ್ಲಿನ ಕಾರ್ಖಾನೆಯೊಂದರಿಂದ ಸಾವಿರಾರು ಜನ ತಪ್ಪಿಸಿಕೊಂಡು ಹೋಗಿದ್ದಾರೆ. ಹೀಗಾಗಿ ಚೀನ ಸರಕಾರ ಮಾನವೀಯತೆಯನ್ನು ಮುಂದಿಟ್ಟುಕೊಂಡು ಜನರನ್ನು ನಡೆಸಿಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next