ಹೊಸದಿಲ್ಲಿ: ಭಾರತದ ಗಡಿ ಭಾಗದಲ್ಲಿ ಸದಾ ಏನಾದರೊಂದು ತರಲೆ, ಕಿರುಕುಳ ನೀಡುತ್ತಲೇ ಇರುವ ಚೀನ, ಭಾರತಕ್ಕೆ ಸವಾಲೆಸೆಯುವಂಥ ಮತ್ತೂಂದು ಕೆಲಸವನ್ನು ಮಾಡಿ ಮುಗಿಸಿದೆ. ತನ್ನ ವಶದಲ್ಲಿರುವ ಟಿಬೆಟ್ ಸ್ವಾಯತ್ತ ಪ್ರಾಂತ್ಯದಿಂದ (ಟಿಎಆರ್) ಭಾರತದ ಗಡಿಯ ರಾಜ್ಯವಾದ ಅರುಣಾಚಲ ಪ್ರದೇಶದವರೆಗೆ ಸಾಗುವ ಹೈವೇಯನ್ನು ಚೀನ ನಿರ್ಮಿಸಿದೆ. ಇದರಲ್ಲಿ 2 ಕಿ.ಮೀ. ದೂರದ ಸುರಂಗ ಮಾರ್ಗವೂ ಇದೆ.
ಚೀನ ಹೇಳೊದೇನು?: “ಇದೊಂದು ಅಭಿವೃದ್ಧಿ ಪರ ಯೋಜನೆಯಾಗಿದ್ದು, ಈ ಹೈವೇಯಿಂದ ಚೀನ ಗಡಿ ಭಾಗದ ಝಾಮೊಂಗ್ ಟೌನ್‌ಶಿಪ್‌ನಿಂದ ದಕ್ಷಿಣ ಟಿಬೆಟ್‌ನ ನೈಂಗ್‌ಚಿ ಎಂಬ ಪ್ರಾಂತ್ಯದವರೆಗೆ ಈವರೆಗಿದ್ದ 346 ಕಿ.ಮೀ. ದೂರವನ್ನು, 180 ಕಿ.ಮೀ.ಗಳಿಗೆ ಇಳಿಸಲಿದೆ. ಇದರಿಂದ ಈ ಎರಡೂ ಪ್ರಾಂತ್ಯಗಳ ನಡುವಿನ ಪ್ರಯಾಣದ ಅವಧಿ 8 ಗಂಟೆಯಷ್ಟು ಕುಗ್ಗಲಿದೆ’ ಎಂದು ಚೀನ ಸರಕಾರ ಹೇಳಿದೆ.
ತಜ್ಞರ ಎಚ್ಚರಿಕೆ: ಚೀನ ಏನೇ ಹೇಳಿದರೂ, ಭಾರತದ ಗಡಿಯ ಸಮೀಪದವರೆಗೂ ಈ ಹೈವೇ ಹಾದು ಬಂದಿರು ವುದು ಭಾರತದ ಮಟ್ಟಿಗೆ ಒಂದು ಎಚ್ಚರಿಕೆಯ ಕರೆಗಂಟೆ ಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತ- ಚೀನ ಗಡಿ ಭಾಗದಲ್ಲಿ ಇಂಥ ಹಲವಾರು ಹೈವೇಗಳನ್ನು ನಿರ್ಮಿ ಸಲು ಚೀನ ನಿರ್ಧರಿಸಿದೆ ಎಂದು ತಜ್ಞರು ಹೇಳಿದ್ದಾರೆ.
ಎಲ್ಲಿಂದ ಎಲ್ಲಿಗೆ? :
ಟಿಬೆಟ್‌ನ ಡ್ರೆಪುಂಗ್ ಪ್ರಾಂತ್ಯದಿಂದ ಆರಂಭವಾಗುವ ಈ ಹೈವೇ, ವಿಶ್ವದ ಅತೀ ಆಳವಾದ ಕಣಿವೆಯಾದ ಯರ್ಲುಂಗ್ ಝಾಂಗ್ಬೊ ಮೂಲಕ ಸಾಗಿ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ, ಭಾರತ-ಚೀನ ಗಡಿಯ ಸಮೀಪ ವಿರುವ ಬಿಶಿಂಗ್ ಎಂಬ ಹಳ್ಳಿಯ ಹೊರವಲ ಯದಲ್ಲಿ ಟಿಬೆಟ್‌ನ ಸರಹದ್ದಿನೊಳಗೆ ಅಂತ್ಯಗೊಳ್ಳುತ್ತದೆ.