Advertisement
“ಬ್ರಹ್ಮಪುತ್ರ ತೀರದ ಭಾರತ, ಬಾಂಗ್ಲಾದೇಶಗಳೊಟ್ಟಿಗೆ ಬೀಜಿಂಗ್ ಉತ್ತಮ ಸಂವಹನ ಇಟ್ಟುಕೊಳ್ಳಲಿದೆ. ಡ್ಯಾಂ ನಿರ್ಮಾಣದ ಯಾರಿಗೂ ಆತಂಕದ ಅಗತ್ಯವಿಲ್ಲ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನ್ಯಿಂಗ್ ಗುರುವಾರ ತಿಳಿಸಿದ್ದಾರೆ.“ಬ್ರಹ್ಮಪುತ್ರ ನದಿಯ ತಗ್ಗಿದ ಪ್ರದೇಶದಲ್ಲಿ ಹೈಡ್ರೋಪವರ್ ಅಭಿವೃದ್ಧಿಪಡಿಸುವುದು ಚೀನಾದ ಕಾನೂನುಬದ್ಧ ಹಕ್ಕು. ಗಡಿಭಾಗದ ನದಿಗಳ ಅಭಿವೃದ್ಧಿ, ನೀರನ್ನು ಬಳಸಿಕೊಳ್ಳುವುದು ನಮ್ಮ ಎಂದಿನ ಹೊಣೆಗಾರಿಕೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಬ್ರಹ್ಮಪುತ್ರ ನದಿ ಕುರಿತಾದ ಇತ್ತೀಚಿನ ಎಲ್ಲ ಬೆಳವಣಿಗೆಗಳನ್ನೂ ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ! ಚೀನಾದ “ಆತಂಕಬೇಡ’ ಎಂಬ ಬಣ್ಣದ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ ಕೊಟ್ಟ ತಿರುಗೇಟು ಇದು. “ಕೆಲವು ಮಾಧ್ಯಮಗಳಲ್ಲಿನ ವರದಿಗಳನ್ನು ನಾವು ಅವಲೋಕಿಸಿದ್ದೇವೆ. ಬ್ರಹ್ಮಪುತ್ರ ನದಿ ಕುರಿತಾಗಿ ಟಿಬೆಟ್‌ನಲ್ಲಿ ಚೀನಾ ನಡೆಸುತ್ತಿರುವ ಎಲ್ಲ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣು ನೆಟ್ಟಿದೆ’ ಎಂದಿದ್ದಾರೆ. “ಗಡಿನದಿಗಳ ಹಿತ ಕಾಪಾಡಲು ನಾವು ಚೀನಾದೊಂದಿಗೆ ಸಂಪರ್ಕ ಸಾಧಿಸಲಿದ್ದೇವೆ. ನದಿಯ ಮೇಲ್ಭಾಗದ ಪ್ರದೇಶಗಳಲ್ಲಿ ಕೈಗೊಳ್ಳುವ ಯೋಜನೆಗಳಿಂದ ಕೆಳಭಾಗಗಳ ಯಾವುದೇ ಚಟುವಟಿಕೆಗಳಿಗೆ ಹಾನಿಯಾಗಬಾರದು ಎಂದು ಚೀನಾಕ್ಕೆ ಸರ್ಕಾರ ಮನವರಿಕೆ ಮಾಡಲಿದೆ’ ಎಂದೂ ತಿಳಿಸಿದ್ದಾರೆ.