ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಚೀನಾದ ಉಪಟಳ ಇನ್ನೂ ಕಡಿಮೆಯಾಗಿಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ, ಆ ದೇಶವು ಪ್ಯಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಾಣ ಮಾಡುತ್ತಿರುವ ಶಂಕೆ ಮೂಡಿದೆ. ಆ ಪ್ರದೇಶದ ಉಪಗ್ರಹ ಚಿತ್ರವನ್ನು ವಿಶ್ಲೇಷಿಸಿದಾಗ ಈ ಅಂಶ ಕಂಡುಬಂದಿದೆ ಎಂದು ಜಿಯೋ ಇಂಟೆಲಿಜೆನ್ಸ್ ಪರಿಣತ ಡೇಮಿಯನ್ ಸೈಮನ್ ಹೇಳಿದ್ದಾರೆ. ಉಪಗ್ರಹ ಚಿತ್ರಗಳನ್ನು ವೀಕ್ಷಿಸಿದಾಗ, ಚೀನಾವು ಸರೋವರದಲ್ಲಿ ಸೇತುವೆ ನಿರ್ಮಿಸುತ್ತಿರುವಂತೆ ಗೋಚರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಸೈನಿಕರ ಕ್ಷಿಪ್ರ ಸಾಗಣೆ ಉದ್ದೇಶ:
ಚೀನಾದ ಭೂಪ್ರದೇಶದಲ್ಲೇ ಬರುವ ಸರೋವರದ ಭಾಗದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದು ಸರೋವರದ ಎರಡೂ ಬದಿಗಳನ್ನು ಸಂಪರ್ಕಿಸುತ್ತಿದ್ದು, ತನ್ನ ಸೈನಿಕರನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಕ್ಷಿಪ್ರವಾಗಿ ಸಾಗಿಸಲು ಚೀನಾಗೆ ಇದರಿಂದ ನೆರವಾಗಲಿದೆ. ಈ ಸೇತುವೆಯು ಬಹುತೇಕ ಪೂರ್ಣಗೊಂಡಿದೆ ಎಂದೂ ಸೈಮನ್ ಟ್ವೀಟ್ ಮಾಡಿದ್ದಾರೆ.
ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ಬ್ಲಾಕ್ ಅನ್ನು ಸಂಪರ್ಕಿಸುವ ಹೊಸ ಸೇತುವೆಯೊಂದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದರ ಜೊತೆಗೆ ಚೀನಾದ ಸೈನಿಕರ ಚಲನವಲನಕ್ಕೆ ಅನುಕೂಲ ಕಲ್ಪಿಸುವಂತೆ ರಸ್ತೆ ಸಂಪರ್ಕವನ್ನೂ ಸುಧಾರಿಸಲಾಗುತ್ತಿದೆ ಎಂದು ಈ ಹಿಂದೆಯೇ ಮಾಧ್ಯಮಗಳು ವರದಿ ಮಾಡಿದ್ದವು.
ಕಳೆದ ವರ್ಷ, ಭಾರತೀಯ ಸೇನೆಯು ಪ್ಯಾಂಗಾಂಗ್ ಸರೋವರದ ದಕ್ಷಿಣ ತಟದಲ್ಲಿರುವ ಕೈಲಾಶ ಶ್ರೇಣಿಗೆ ಹತ್ತುವ ಮೂಲಕ, ಚೀನಾ ಪಡೆಗಳ ವಿರುದ್ಧ ಮುನ್ನಡೆ ಸಾಧಿಸಿತ್ತು.
ಇದನ್ನೂ ಓದಿ : ಬಂಡೆಗಳನ್ನೇ ನುಂಗಿ ಜೀರ್ಣಿಸಿಕೊಂಡವರಿಗೆ ಟೀಕೆಗಳು ಯಾವ ಲೆಕ್ಕ : ಡಿಕೆಶಿಗೆ ಹೆಚ್ಡಿಕೆ ಟಾಂಗ್