Advertisement

ಭೀತಿ ತಂದಿದ್ದ ಇರಾನ್‌ ವಿಮಾನ; ಭದ್ರತೆ ಕೊಟ್ಟ ಸುಖೋಯ್‌ ಯುದ್ಧ ವಿಮಾನಗಳು

08:55 PM Oct 03, 2022 | Team Udayavani |

ನವದೆಹಲಿ: ಇರಾನ್‌ನ ರಾಜಧಾನಿ ಟೆಹ್ರಾನ್‌ನಿಂದ ಚೀನದ ಗುವಾಂಗ್‌ಝೌಗೆ ಸೋಮವಾರ ಪ್ರಯಾಣ ಬೆಳೆಸುತ್ತಿದ್ದ ವಿಮಾನವು ಕೆಲ ಗಂಟೆಗಳ ಕಾಲ ಭಾರತೀಯರಲ್ಲಿ ಭೀತಿ ಹುಟ್ಟಿಸಿತ್ತು. ವಿಮಾನವು ದೇಶದ ವಾಯುಪ್ರದೇಶದಲ್ಲಿದ್ದಾಗಲೇ ವಿಮಾನದಲ್ಲಿ ಬಾಂಬ್‌ ಇರುವುದಾಗಿ ಕರೆ ಬಂದಿದ್ದು, ವಿಮಾನವನ್ನು ಸುರಕ್ಷಿತವಾಗಿ ಭಾರತೀಯ ಗಡಿ ದಾಟಿಸಲು ವಾಯುಪಡೆ ಹರಸಾಹಸ ಮಾಡಬೇಕಾಯಿತು.

Advertisement

ಮಹಾನ್‌ ಏರ್‌ಫ್ಲೈಟ್‌ ಡಬ್ಲ್ಯೂ 581 ವಿಮಾನದಲ್ಲಿ ಬಾಂಬ್‌ ಇದ್ದಿದ್ದಾಗಿ ಕರೆ ಬಂದಿತ್ತು. ತಕ್ಷಣ ಎಚ್ಚೆತ್ತುಕೊಂಡ ವಾಯುಪಡೆಯು ವಿಮಾನವನ್ನು ಜೈಪುರದಲ್ಲಿ ಭೂಸ್ಪರ್ಶ ಮಾಡುವಂತೆ ವಿಮಾನದ ಪೈಲೆಟ್‌ಗೆ ತಿಳಿಸಿತು. ಆದರೆ ಅದಕ್ಕೆ ಪೈಲೆಟ್‌ಗಳು ಒಪ್ಪದಿದ್ದಾಗ ಚಂಡೀಗಢದಲ್ಲೂ ಅವಕಾಶ ಮಾಡಿಕೊಡಲಾಯಿತು. ಆದರೆ ಪೈಲೆಟ್‌ಗಳು ಅದಕ್ಕೂ ಒಪ್ಪಿಲ್ಲ. ವಿಮಾನದ ಜತೆ ನಿರಂತರ ಸಂಪರ್ಕದಲ್ಲಿದ್ದ ನವದೆಹಲಿಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಬೆದರಿಕೆ ಕರೆಯನ್ನು ನಿರ್ಲಕ್ಷಿಸಿ ಎಂದು ಟೆಹ್ರಾನ್‌ನಿಂದ ಕರೆ ಬಂದ ನಂತರ ವಿಮಾನ ಚೀನದತ್ತ ಪ್ರಯಾಣ ಬೆಳೆಸಿದೆ.

ಚೀನದ ಗುವಾಂಗ್‌ಝೌ ವಿಮಾನ ನಿಲ್ದಾಣದಲ್ಲಿ ವಿಮಾನವು ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದೆ. ನಂತರ ಪರಿಶೀಲನೆ ಮಾಡಿದಾಗ ಇದೊಂದು ಹುಸಿ ಬಾಂಬ್‌ ಬೆದರಿಕೆ ಕರೆ ಎನ್ನುವುದು ತಿಳಿದುಬಂದಿದೆ.

ಹಿಂಬಾಲಿಸಿದ ಸುಖೋಯ್‌:
ಈ ರೀತಿಯ ಕರೆ ಬಂದ ತಕ್ಷಣವೇ ವಾಯುಪಡೆ ಕಾರ್ಯಾಚರಣೆಗೆ ಇಳಿಯಿತು. ತಕ್ಷಣ ತನ್ನ ಯುದ್ಧ ವಿಮಾನವಾದ ಸುಖೋಯ್‌ ಎಸ್‌ಯು-30ಎಂಕೆಐ ಅನ್ನು ಆಗಸಕ್ಕೆ ಹಾರಿಸಿದೆ. ಬೆದರಿಕೆ ಇದ್ದ ವಿಮಾನವನ್ನು ಸುರಕ್ಷಿತ ದೂರದಿಂದಲೇ ಸುಖೋಯ್‌ ಹಿಂಬಾಲಿಸಿದೆ. ವಿಮಾನವು ಭಾರತೀಯ ವಾಯುಪ್ರದೇಶದಿಂದ ಹೊರನಡೆದ ನಂತರವೇ ಯುದ್ಧ ವಿಮಾನ ವಾಪಸು ಬಂದಿದೆ.

ಪಾಕ್‌ ದಾಟಿ ಬಂದಿದ್ದ ವಿಮಾನ:
ಇರಾನ್‌ನಿಂದ ಹೊರಟಿದ್ದ ವಿಮಾನ ಪಾಕಿಸ್ತಾನವನ್ನು ದಾಟಿ ಭಾರತದ ವಾಯುಪ್ರದೇಶ ತಲುಪಿತ್ತು. ನಂತರ ಬಾಂಗ್ಲಾದೇಶ, ಮಾಯನ್ಮಾರ್‌ ಮಾರ್ಗವಾಗಿ ಚೀನ ತಲುಪಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next