ನ್ಯೂಯಾರ್ಕ್: ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್-ಎ-ತಯ್ಯಬಾ ನಾಯಕ ಶಾಹಿದ್ ಮಹಮೂದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ಮಾಡಿರುವ ಪ್ರಸ್ತಾವವನ್ನು ಚೀನ ತಡೆಹಿಡಿದಿದೆ.
ಇತ್ತೀಚಿನ ದಿನಗಳಲ್ಲಿ ಉಗ್ರರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಚೀನ ಅಡ್ಡಗಾಲು ಹಾಕಿರುವ ನಾಲ್ಕನೇ ನಿದರ್ಶನ ಇದಾಗಿದೆ. ಈ ಮೂಲಕ ಚೀನ ತನ್ನ ಕಪಟತನವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡುವ ಭಾರತ ಮತ್ತು ಅಮೆರಿಕದ ಪ್ರಸ್ತಾವಕ್ಕೆ ಪಾಕಿಸ್ಥಾನದ ಪರಮಾಪ್ತನಾಗಿರುವ ಚೀನ ಅಡ್ಡಗಾಲು ಹಾಕಿದೆ.
ಲಷ್ಕರ್-ಎ-ತಯ್ಯಬಾದ ನಿಧಿ ಸಂಗ್ರಹ ಮತ್ತು ಅದರ ಬೆಂಬಲ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ 2016ರ ಡಿಸೆಂಬರ್‌ನಲ್ಲಿ ಅಮೆರಿಕದ ಹಣಕಾಸು ಇಲಾಖೆ ಮಹಮೂದ್(42) ಮತ್ತು ಲಷ್ಕರ್-ಎ-ತಯ್ಯಬಾ ಮತ್ತೊಬ್ಬ ನಾಯಕ ಮೊಹಮ್ಮದ್ ಸರ್ವರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಜೂನ್‌ನಲ್ಲಿ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು, ಆಗಸ್ಟ್‌ನಲ್ಲಿ ಜೈಶ್ ಉಗ್ರ ಅಬ್ದುಲ್ ರವೂಫ್ ಅಝರ್‌ನನ್ನು, ಸೆಪ್ಟಂಬರ್ನಲ್ಲೂ ಲಷ್ಕರ್ ಹ್ಯಾಂಡ್ಲರ್ ಒಬ್ಬನನ್ನು ನಿಷೇಧಿತ ಉಗ್ರರ ಪಟ್ಟಿಗೆ ಸೇರ್ಪಡೆ ಮಾಡಲು ಚೀನ ತಡೆಯೊಡ್ಡಿತ್ತು.
ಲಷ್ಕರ್-ಎ- ತಯ್ಯಬಾದ ಹಿರಿಯ ನಾಯಕನಾಗಿರುವ ಶಾಹಿದ್ ಮಹಮೂದ್ ಸದ್ಯ ಕರಾಚಿಯಲ್ಲಿ ನೆಲೆಸಿದ್ದಾನೆ. 2007ರಿಂದ ಲಷ್ಕರ್-ಎ-ತಯ್ಯಬಾದೊಂದಿಗೆ ಗುರುತಿಸಿ ಕೊಂಡಿದ್ದಾನೆ.