Advertisement

ತೈವಾನ್‌ ಸಾಧನೆ ಕಂಡು ಚೀನಕ್ಕೆ ಹೊಟ್ಟೆಯುರಿ

05:19 PM May 17, 2020 | sudhir |

ಹಾಂಕಾಂಗ್‌: ಅನೇಕ ರಾಷ್ಟ್ರಗಳು ಕೋವಿಡ್‌ -19 ವಿರುದ್ಧ ಹೋರಾಡುವುದಕ್ಕೆ ಒದ್ದಾಡುತ್ತಿರುವಾಗ 2.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ತೈವಾನ್‌ ಈ ಸೋಂಕಿನ ಮೇಲೆ ಹತೋಟಿ ಸಾಧಿಸಿದಂತೆ ಕಂಡು ಬರುತ್ತಿದೆ ಹಾಗೂ ಈ ಕಾರಣಕ್ಕೆ ನೆರೆಯ ದೇಶವಾಗಿರುವ ಚೀನಕ್ಕೆ ಹೊಟ್ಟೆ ಉರಿ ಪ್ರಾರಂಭವಾಗಿದೆ.

Advertisement

ಜನವರಿಯಲ್ಲಿ ಕೋವಿಡ್‌-19 ಕಾಣಿಸಿಕೊಂಡೊಡನೆಯೇ ಈ ಸ್ವಯಮಾಡಳಿತದ ಪ್ರಜಾತಾಂತ್ರಿಕ ದ್ವೀಪರಾಷ್ಟ್ರವು ಪ್ರಧಾನಭೂಮಿ ಚೀನದ ವಿವಿಧ ಭಾಗಗಗಳಿಂದ ಜನರ ಆಗಮನಕ್ಕೆ ನಿಷೇಧ ಹೇರಿತ್ತು. ವಿಹಾರ ನೌಕೆಗಳು ತನ್ನ ಕಡಲತೀರದಲ್ಲಿ ಲಂಗರು ಹಾಕುವುದನ್ನೂ ನಿಷೇಧಿಸಿತ್ತು. ಮಾರ್ಚ್‌ನಲ್ಲಿ ದೇಶೀಯವಾಗಿ ಮಾಸ್ಕ್ಗಳ ಉತ್ಪಾದನೆಯನ್ನು ಹೆಚ್ಚಿಸಿತ್ತು.

ಕೋವಿಡ್‌-19 ಸೋಂಕು ಕಾಣಿಸಿಕೊಂಡ ಬಳಿಕ ವೈದ್ಯಾಧಿಕಾರಿಗಳಿಂದ ದೈನಂದಿನ ಅಂಕಿ-ಅಂಶಗಳ ಬಿಡುಗಡೆ ಸಹಿತ ತ್ವರಿತ ಹಾಗೂ ಪಾರದರ್ಶಕ ನಿಭಾವಣೆ ಮೂಲಕ ತೈವಾನ್‌ ಪ್ರಜಾತಾಂತ್ರಿಕ ರಾಷ್ಟ್ರಗಳು ಸಾಂಕ್ರಾಮಿಕ ರೋಗವನ್ನು ಹತೋಟಿಯಲ್ಲಿರಿಸುವಲ್ಲಿ ಹೇಗೆ ಮಾದರಿಯಾಗಬಲ್ಲವು ಎಂಬುದನ್ನು ತೋರಿಸಿದೆ. ಕೋವಿಡ್‌ ನಿಯಂತ್ರಣಕ್ಕೆ ತೈವಾನ್‌ ಚೀನ ಸಹಿತ ಬೇರೆ ಕೆಲ ದೇಶಗಳಂತೆ ಕಟ್ಟುನಿಟ್ಟಿನ ಲಾಕ್‌ಡೌನ್‌ ಕೂಡ ವಿಧಿಸಿರಲಿಲ್ಲ.

ಇನ್ನೊಂದೆಡೆ ಚೀನವು ಕೋವಿಡ್‌ ಕುರಿತ ವಾಸ್ತವಗಳನ್ನು ಜಗತ್ತಿನಿಂದ ಮರೆ ಮಾಚಿದ್ದಕ್ಕಾಗಿ ಮತ್ತು ವೈರಸ್‌ನ ಅಪಾಯಗಳ ಕುರಿತು ಮಾತನಾಡಿದ್ದ ವಿಜ್ಞಾನಿಗಳು ಹಾಗೂ ವೈದ್ಯರ ಬಾಯಿ ಮುಚ್ಚಿಸಿದ್ದಕ್ಕಾಗಿ ವಿಶ್ವಾದ್ಯಂತ ಖಂಡನೆಗೆ ಗುರಿಯಾಗಿದೆ.
ಶನಿವಾರದ ಅಂಕಿ-ಅಂಶಗಳ ಪ್ರಕಾರ ತೈವಾನ್‌ನಲ್ಲಿ 440 ಸಕ್ರಿಯ ಕೋವಿಡ್‌-19 ಪ್ರಕರಣಗಳಿದ್ದು ಈವರೆಗೆ 7 ಮಂದಿ ಬಲಿಯಾಗಿದ್ದಾರೆ. ಇದಕ್ಕೆ ಹೋಲಿಸಿದಲ್ಲಿ ಸುಮಾರು 2.5ಕೋಟಿ ಜನಸಂಖ್ಯೆಯನ್ನು ಹೊಂದಿರುವ ಆಸ್ಟ್ರೇಲಿಯದಲ್ಲಿ 7,000ಕ್ಕೂ ಅಧಿಕ ಸೋಂಕುಪೀಡಿತರಿದ್ದು 98 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್‌ ಪೀಡಿತ ರಾಷ್ಟ್ರಗಳಿಗೆ “ತೈವಾನ್‌ ನೆರವಾಗಬಲ್ಲುದು’ ಎಂಬ ಘೋಷಣೆಗೆ ವ್ಯಾಪಕ ಸ್ವಾಗತ ಸಿಕ್ಕಿದೆ. ಕಳೆದ ತಿಂಗಳು ತೈವಾನ್‌ 10 ದಶಲಕ್ಷ ಮಾಸ್ಕ್ಗಳನ್ನು ಅಮೆರಿಕ, ಐರೋಪ್ಯ ರಾಷ್ಟ್ರಗಳು ಹಾಗೂ ಆಫ್ರಿಕ ಮತ್ತು ಕೆರಿಬಿಯನ್‌ನ 15 ಸಣ್ಣ ರಾಷ್ಟ್ರಗಳಿಗೆ ದೇಣಿಗೆ ನೀಡಿತ್ತು. ಈ ಕ್ರಮವನ್ನು ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷ ಉರ್ಸುಲ ವನ್‌ಡರ್‌ ಲಿಯೆನ್‌ ಅವರು ಬಹುವಾಗಿ ಶ್ಲಾ ಸಿದ್ದರು.

Advertisement

ಕೋವಿಡ್‌-19 ವಿರುದ್ಧ ಹೋರಾಟದ ತನ್ನ ಅನುಭವವನ್ನು ಹಂಚಿಕೊಳ್ಳಲು ಉತ್ಸುಕವಾಗಿರುವ ತೈವಾನ್‌ ಇದೀಗ ಜಾಗತಿಕ ಆರೋಗ್ಯ ಸಂವಾದಗಳಲ್ಲಿ ತನ್ನ ಪಾಲ್ಗೊಳ್ಳುವಿಕೆಗೆ ಅವಕಾಶವೀಯಬೇಕೆಂದು ಆಗ್ರಹಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಸದಸ್ಯರ ವಾರ್ಷಿಕ ಸಮಾವೇಶವಾಗಿರುವ ವರ್ಲ್ಡ್ ಹೆಲ್ತ್‌ ಅಸೆಂಬ್ಲಿ(ಡಬ್ಲ್ಯುಎಚ್‌ಎ) ಮುಂದಿನ ವಾರ ಜರಗಲಿದ್ದು ಅದರಲ್ಲಿ ತೈವಾನ್‌ ಪಾಲ್ಗೊಳ್ಳುವುದನ್ನು ಅಮೆರಿಕ, ಜಪಾನ್‌ ಮತ್ತು ನ್ಯೂಜಿಲ್ಯಾಂಡ್‌ ಬೆಂಬಲಿಸುತ್ತಿವೆ. ತೈವಾನ್‌ ಡಬ್ಲ್ಯುಎಚ್‌ಒ ಸದಸ್ಯನಲ್ಲದಿದ್ದರೂ 2009ರಿಂದ 2015ರ ತನಕ ವೀಕ್ಷಕನಾಗಿ ಡಬ್ಲ್ಯುಎಚ್‌ಎಯನ್ನು ಸೇರಿತ್ತು.

ಆದರೆ ತೈವಾನ್‌ನ ನಡೆ ಚೀನದ ಕಣ್ಣು ಕೆಂಪಗಾಗಿಸಿದೆ.ತೈವಾನ್‌ ತನ್ನ ಅವಿಭಾಜ್ಯ ಅಂಗವೆಂದು ಹೇಳುತ್ತಿರುವ ಚೀನ, ವಿವಿಧ ಜಾಗತಿಕ ಸಂಸ್ಥೆಗಳಲ್ಲಿ ತೈವಾನ್‌ ಪಾಲ್ಗೊಳ್ಳುವುದನ್ನು ಅನೇಕ ವರ್ಷಗಳಿಂದ ನಿರ್ಬಂಧಿಸುತ್ತ ಬಂದಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ತೈವಾನ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಸಾರುವುದಕ್ಕೆ ಅಪೂರ್ವ ಅವಕಾಶ ಪಡೆದಿರುವಂತೆಯೇ ಚೀನ ಅದು ತನ್ನ ವಿಧ್ಯುಕ್ತ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಿಸುತ್ತಿದೆಯೆಂದು ಆಪಾದಿಸಿದೆ ಮತ್ತು ದ್ವೀಪರಾಷ್ಟ್ರದ ಸುತ್ತ ತನ್ನ ಮಿಲಿಟರಿ ಕವಾಯತನ್ನು ಹೆಚ್ಚಿಸಿದೆ.

ತೈವಾನ್‌ ಮತ್ತು ಚೀನ ನಡುವೆ ಉದ್ವಿಗ್ನತೆ ಹೆಚ್ಚಿರುವಂತೆ ದ್ವೀಪರಾಷ್ಟ್ರವನ್ನು ಮರುವಶಪಡಿಸಿಕೊಳ್ಳುವುದಕ್ಕೆ ಮಿಲಿಟರಿ ಕ್ರಮ ಜರಗಿಸುವಂತೆ ಚೀನದೊಳಗೆ ಕೂಗು ಕೇಳಿಬರುತ್ತಿದೆ. ಈಗ ಕೋವಿಡ್‌ ಸೋಂಕು ಜಗತ್ತನ್ನು ಆವರಿಸಿರುವಾಗ ದಾಳಿ ನಡೆಸುವುದಕ್ಕೆ ಸುವರ್ಣಾವಕಾಶವಿದೆ. ಏಕೆಂದರೆ ಅಮೆರಿಕ ಕೋವಿಡ್‌ ವಿರುದ್ಧ ಹೋರಾಟದಲ್ಲಿ ಹೈರಾಣಾಗಿದೆ ಮತ್ತು ವಲಯದಲ್ಲಿರುವ ಅವರ ವಿಮಾನವಾಹಕ ನೌಕೆ ಯುಎಸ್‌ಎಸ್‌ ತಿಯೋಡೋರ್‌ ರೂಸ್‌ವೆಲ್ಟ್ನಲ್ಲಿ ಸೋಂಕು ಉಂಟಾಗಿ ಅದರ ಮಿಲಿಟರಿ ಬಲ ಬಾಧಿತವಾಗಿದೆ ಎಂದು ಚೀನಿ ಸಾಮಾಜಿಕ ಹಾಗೂ ಮುದ್ರಣ ಮಧ್ಯಮದಲ್ಲಿ ಕೆಲವರು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next