ಅಮೆರಿಕ ಮತ್ತು ಚೀನಾ ನಡುವಿನ ವಾಪಾರ ಯುದ್ಧ ಮತ್ತೂಮ್ಮೆ ತಾರಕಕ್ಕೆ ಏರಿದೆ. ಚೀನಾದಿಂದ ತನ್ನ ದೇಶಕ್ಕೆ ಆಮದಾಗುವ 200 ಶತಕೋಟಿ ಡಾಲರ್ ಮೊತ್ತದ ವಸ್ತುಗಳ ಮೇಲಿನ ಸುಂಕವನ್ನು 25 ಪ್ರತಿಶತಕ್ಕೆ ಏರಿಸಿದೆ ಅಮೆರಿಕ. ಮೊದಲು ಈ ಪ್ರಮಾಣ ಕೇವಲ 10 ಪ್ರತಿಶತದಷ್ಟಿತ್ತು. ಅಚ್ಚರಿಯ ಸಂಗತಿಯೆಂದರೆ, ಮೇಲ್ನೋಟಕ್ಕೆ ಎರಡೂ ರಾಷ್ಟ್ರಗಳೂ ತಮ್ಮ ನಡುವಿನ ವ್ಯಾಪಾರ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಅನಿಸುತ್ತಿರುವ ಹೊತ್ತಲ್ಲೇ ಅಮೆರಿಕದಿಂದ ಈ ನಿರ್ಧಾರ ಹೊರಬಿದ್ದಿದೆ. ಈಗ ಚೀನಾದ ಉಪಪ್ರಧಾನಿ ಲ್ಯೂ ಹೇ ನೇತೃತ್ವದಲ್ಲಿ ಪ್ರತಿನಿಧಿಮಂಡಲವೊಂದು ಅಮೆರಿಕವನ್ನು ತಲುಪಲಿದೆ.
ಆದರೆ ಮಾತುಕತೆಯ ವಿಚಾರದಲ್ಲಿ ಚೀನಾಗೆ ಗಂಭೀರತೆಯೇ ಇಲ್ಲ ಎನ್ನುವುದು ಅಮೆರಿಕದ ಆರೋಪ. ಅಮೆರಿಕದ ವ್ಯಾಪಾರ ಪ್ರತಿನಿಧಿ ಮಂಡಲದ ಮುಖ್ಯಸ್ಥರೂ ಕೂಡ ಸೋಮವಾರ ಇದೇ ಮಾತನ್ನೇ ಹೇಳಿದ್ದರು. ವ್ಯಾಪಾರ ಸಮರವನ್ನು ತಗ್ಗಿಸುವ ವಿಚಾರದಲ್ಲಿ ಚೀನಾದ ಬದ್ಧತೆ ಕಡಿಮೆ ಇದೆ, ಹೀಗಾಗಿ ಅದರೊಂದಿಗೆ ಮಾತುಕತೆಯಿಂದ ಪ್ರಯೋಜನವಿಲ್ಲ ಎಂಬ ಧಾಟಿಯಲ್ಲಿ ಅವರು ಮಾತನಾಡಿದಾಗಲೇ, ಅಮೆರಿಕದ ಮುಂದಿನ ಹೆಜ್ಜೆಗಳ ಬಗ್ಗೆ ಜಾಗತಿಕ ವಿತ್ತ ಲೋಕ ಕುತೂಹಲದಿಂದ ನೋಡಿತ್ತು. ಈಗ ಎದುರಾಗಿರುವ ಪ್ರಶ್ನೆಯೇನೆಂದರೆ ಅಮೆರಿಕ-ಚೀನಾ ಜಗಳದಿಂದಾಗಿ ಜಾಗತಿಕ ವಿತ್ತ ವ್ಯವಸ್ಥೆಯ ಮೇಲೆ ಮತ್ತು ಭೂ-ರಾಜಕೀಯ ಪರಿದೃಶ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು? ಸದ್ಯಕ್ಕಂತೂ ಈ ಎರಡೂ ಜಾಗತಿಕ ಸೂಪರ್‌ಪವರ್‌ಗಳ ಜಗಳದ ಪರಿಣಾಮವು ಜಾಗತಿಕ ಶೇರುಮಾರುಕಟ್ಟೆಯಲ್ಲಿನ ಕುಸಿತದ ರೂಪದಲ್ಲಿ ಕಾಣಿಸಿಕೊಂಡಿದೆ. ಕೆಲವು ವಿಶೇಷಜ್ಞರಂತೂ ಇದನ್ನು ಆರ್ಥಿಕ ಶೀತಲಯುದ್ಧದ ಆರಂಭ ಎಂದೇ ಬಣ್ಣಿಸುತ್ತಿದ್ದಾರೆ. ಈ ಶೀತಲ ಯುದ್ಧ ಮುಂದಿನ 20 ವರ್ಷಗಳವರೆಗಾದರೂ ನಡೆಯಲಿದೆ ಎನ್ನುವುದು ಕೆಲವರ ಅಭಿಪ್ರಾಯ. ಅಮೆರಿಕದ ಈ ಏಟಿನಿಂದ ಮುನಿಸಿಕೊಂಡಿರುವ ಚೀನಾ, ತಾನೂ ಕಠಿಣ ಹೆಜ್ಜೆ ಇಡುವುದಾಗಿ ಎಚ್ಚರಿಸುತ್ತಿದೆ. ಆದರೆ ನಿಜಕ್ಕೂ ಆ ರಿಸ್ಕ್ ತೆಗೆದುಕೊಳ್ಳಲು ಅದು ಸಿದ್ಧವಿದೆಯೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಅಮೆರಿಕಕ್ಕೂ ಕೂಡ ತಾನು ಬಿಟ್ಟಿರುವ ಅಸ್ತ್ರ ತಿರುಗುಬಾಣವಾಗಬಲ್ಲದು ಎನ್ನುವ ಭಯ ಇಲ್ಲದಿಲ್ಲ. ಅಮೆರಿಕದ ಮಾರುಕಟ್ಟೆಯಲ್ಲಿ ಚೀನಾ ಉತ್ಪನ್ನಗಳ ಅಸ್ತಿತ್ವ ಅಧಿಕವಿದೆ.
ಅವುಗಳ ಮೇಲೆ 25 ಪ್ರತಿಶತ ಶುಂಕ ಹೆಚ್ಚಿಸಿದರೆ, ಅದರ ಪರಿಣಾಮವು ಅಮೆರಿಕದ ನಿಮ್ನಮಧ್ಯಮ ವರ್ಗದ ಮೇಲೆಯೂ ಬೀಳುತ್ತದೆ. ಅಂಥ ಸನ್ನಿವೇಶವನ್ನು ಎದುರಿಸಲು ಅಮೆರಿಕ ಸಜ್ಜಾಗಿದೆಯೇ ಎನ್ನುವುದೇ ಪ್ರಶ್ನೆ. ಇನ್ನು ಅಮೆರಿಕ ಚೀನಾದೊಂದಿಗೆ ಏಕಮುಖೀ ವ್ಯಾಪಾರವನ್ನೇನೂ ನಡೆಸುತ್ತಿಲ್ಲ, ಅಮೆರಿಕದ ಅನೇಕ ಕಂಪನಿಗಳೂ ಚೀನಾದಲ್ಲಿ ಅಸ್ತಿತ್ವದಲ್ಲಿವೆ(ಚೀನಾದಿಂದಲೇ ಅಸ್ತಿತ್ವದಲ್ಲಿವೆ ಎನ್ನಲೂಬಹುದು). ಇಷ್ಟೆಲ್ಲ, ಅಪಾಯದ ಅರಿವಿದ್ದರೂ ಅದೇಕೆ ಟ್ರಂಪ್ ಸರ್ಕಾರ ಇಂಥ ಕ್ರಮಕ್ಕೆ ಮುಂದಾಗಿದೆ ಎನ್ನುವುದು ಸಹಜ ಪ್ರಶ್ನೆಯೇ. ಎಲ್ಲಿ ತಂತ್ರಜ್ಞಾನಿಕ ಉನ್ನತಿಯ ಮೂಲಕ ಚೀನಾದ ಅರ್ಥವ್ಯವಸ್ಥೆ ಮತ್ತು ಭೂರಾಜಕೀಯ ಶಕ್ತಿ ಅಮೆರಿಕವನ್ನು ದಾಟಿ ಮುಂದೆ ಸಾಗಿಬಿಡುತ್ತದೋ ಎನ್ನುವ ಭಯ ಅಮೆರಿಕ ಸರ್ಕಾರಕ್ಕಂತೂ ಇದೆ. ಒಂದು ವೇಳೆ ಚೀನಾ ಆರ್ಥಿಕವಾಗಿ ಅಮೆರಿಕವನ್ನು ತುಂಬಾ ಹಿಂದೂಡಿ ಮುಂದೆಸಾಗಿಬಿಟ್ಟರೆ ಜಾಗತಿಕ ನಕ್ಷೆಯಲ್ಲೇ ಚೀನಾದ ಪ್ರಾಬಲ್ಯವೇ ಅಧಿಕವಾಗಿಬಿಡುತ್ತದೆ.
ಇಂದು ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುವ ದೇಶಗಳು, ನಾಳೆ ಚೀನಾದ ಬತ್ತಳಿಕೆಯಲ್ಲಿ ಸೇರಿಕೊಂಡುಬಿಡುತ್ತವೆ. ಹೀಗಾಗಿ, ಚೀನಾವನ್ನು ವ್ಯಾಪಾರದ ಕೆಲವು ಕ್ಷೇತ್ರಗಳಲ್ಲಿ ದುರ್ಬಲವಾಗಿ ಇಡುವ ಪ್ರಯತ್ನ ಅಮೆರಿಕದ್ದು. ಈ ತಂತ್ರ ಎಷ್ಟರಮಟ್ಟಿಗೆ ಫಲಕೊಡುತ್ತದೋ ತಿಳಿಯದು. ಆದರೂ ಚೀನಾ ಅಮೆರಿಕದೊಂದಿಗೆ ವ್ಯಾಪಾರ ಮೈತ್ರಿಯನ್ನು ಸಂಪೂರ್ಣ ಕಡಿದುಕೊಳ್ಳುವ ಹಂತದಲ್ಲೂ ಇಲ್ಲ ಎನ್ನುವುದೂ ಅಷ್ಟೇ ಸತ್ಯ ಸಂಗತಿ. ಈ ವಿದ್ಯಮಾನದಿಂದ ಭಾರತದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎನ್ನುವುದು ಕೆಲವೇ ಸಮಯದಲ್ಲೇ ತಿಳಿಯಲಿದೆ. ಆದರೂ ಗುಣಾತ್ಮಕ ದೃಷ್ಟಿಯಿಂದ ನೋಡುವುದಾದರೆ, ಚೀನಾ ಅಮೆರಿಕದೊಂದಿಗೆ ಬಿಕ್ಕಟ್ಟಿನಲ್ಲಿ ಇದ್ದಷ್ಟು ದಿನ ಅದು ಇತರೆ ವ್ಯಾಪಾರ ರಾಷ್ಟ್ರಗಳೊಂದಿಗೆ ಅಷ್ಟು ತಂಟೆಗೆ ಹೋಗುವುದನ್ನು ತಗ್ಗಿಸುತ್ತದೆ. ಚೀನಾ ಕೆಲ ಸಮಯದಿಂದ ಭಾರತ ಮತ್ತು ಜಪಾನ್‌ನೊಂದಿಗೆ ಮೃದುವಾಗಿ ವರ್ತಿಸುತ್ತಿರುವುದರ ಹಿಂದೆಯೂ ಅದರ ಇದೇ ಕಳವಳ ಕೆಲಸ ಮಾಡುತ್ತಿದೆ.
ಜಾಗತಿಕ ಆರ್ಥಿಕತೆಯು ಸ್ವಸ್ಥವಾಗಿದ್ದಷ್ಟು ದಿನ ಅಂತಾರಾಷ್ಟ್ರೀಯ ಬ್ಯಾಂಕುಗಳು ಬಡ್ಡಿ ದರಗಳಲ್ಲಿ ತಾಟಸ್ಥ್ಯ ವಹಿಸುತ್ತವೆ ಮತ್ತು ಹೂಡಿಕೆಯ ಹರಿವೂ ಸುಸ್ಥಿರವಾಗಿರುತ್ತದೆ. ಒಂದು ವೇಳೆ ಚೀನಾ-ಅಮೆರಿಕ ವ್ಯಾಪಾರ ಯುದ್ಧ ಹದ್ದುಮೀರಿತೆಂದರೆ, ಅದು ಜಾಗತಿಕ ಅಭಿವೃದ್ಧಿ ದರದ ಮೇಲೂ ಪೆಟ್ಟು ಕೊಡುತ್ತದೆ. ಅದರ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳೂ ಎದುರಿಸಬೇಕಾಗುತ್ತದೆ. ಆ ಸವಾಲುಗಳನ್ನು ಎದುರಿಸಲು ಭಾರತ ಸಜ್ಜಾಗಿರಬೇಕು.