ಖೀಂಗ್ದಾವೋ: ಶಾಂಘೈ ಸಹಕಾರ ಸಂಘಟನೆ ಸಭೆಗಾಗಿ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಖೀಂ
ಗ್ದಾವೋದಲ್ಲಿ ನಡೆಯುತ್ತಿರುವ ಸಮ್ಮೇಳನದ ಆವರಣದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಎರಡು ಒಪ್ಪಂದಗಳಿಗೆ ಸಹಿಯನ್ನೂ ಹಾಕಲಾಗಿದೆ.
ಒಂದೂವರೆ ತಿಂಗಳ ಹಿಂದೆ ವುಹಾನ್‌ನಲ್ಲಿ ನಡೆದ ಸಮ್ಮೇಳನದ ವೇಳೆ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಇದೀಗ ಮತ್ತೂಮ್ಮೆ ಭೇಟಿಯಾಗಿದ್ದು, ಜಾಗತಿಕ ಮತ್ತು ಉಭಯ ದೇಶಗಳಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದು ಭಾರತ ಮತ್ತು ಚೀನಾ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಉಭಯ ದೇಶಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಭೇಟಿಯಲ್ಲಿ ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನದ ಮೇಲ್ವಿಚಾರಣೆಯನ್ನೂ ಈ ವೇಳೆ ನಡೆಸಲಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಮತ್ತು ಕ್ಸಿ ಮಧ್ಯೆ ಇದು 14ನೇ ಸಭೆಯಾಗಿದೆ ಎಂದು ಭಾರತಕ್ಕೆ ಚೀನಾದ ರಾಯಭಾರಿ ಲುವೊ ಝಾವೊಹುಯಿ ಹೇಳಿದ್ದಾರೆ. ಎರಡು ದಿನಗಳ ಭೇಟಿಗಾಗಿ ಮೋದಿ ಶನಿವಾರ ಬೆಳಗ್ಗೆ ಚೀನಾಗೆ ಆಗಮಿಸಿದ್ದಾರೆ.
ಭಾರತಕ್ಕೆ ಮೊದಲ ಸಮ್ಮೇಳನ: ಕಳೆದ ವರ್ಷವಷ್ಟೇ ಭಾರತ ಹಾಗೂ ಪಾಕಿಸ್ತಾನ ಎಸ್‌ಸಿಒಗೆ ಸೇರಿದ್ದು, ಇದೇ ಮೊದಲ ಬಾರಿಗೆ ಎಸ್‌ಸಿಒ ಸಮ್ಮೇಳನದಲ್ಲಿ ಭಾರತ ಭಾಗವಹಿಸುತ್ತಿದೆ. ಹೀಗಾಗಿ ಮೋದಿ ಮೊದಲ ಬಾರಿಗೆ ಈ ಸಮ್ಮೇಳನಕ್ಕೆ ಹಾಜರಾಗಿದ್ದಾರೆ. ಎಸ್‌ಸಿಒ ಒಟ್ಟು ಎಂಟು ಸದಸ್ಯ ದೇಶಗಳನ್ನು ಹೊಂದಿದೆ. ಈ ದೇಶಗಳು ಒಟ್ಟಾಗಿ ವಿಶ್ವದ ಶೇ.42ರಷ್ಟು ಜನಸಂಖ್ಯೆಯನ್ನು ಒಳಗೊಂಡಿದ್ದರೆ, ವಿಶ್ವದ ಜಿಡಿಪಿಯಲ್ಲಿ ಶೇ.20ರಷ್ಟು ಪಾಲು ಹೊಂದಿದೆ. 2005ರಿಂದಲೂ ಭಾರತ ಕೇವಲ ವೀಕ್ಷಕನಾಗಿತ್ತು. ಹೀಗಾಗಿ ಸಚಿವ ಮಟ್ಟದ ಸಭೆಗಳಲ್ಲಿ ಮಾತ್ರವೇ ಭಾಗವಹಿಸುತ್ತಿತ್ತು.
2019ಕ್ಕೆ ಜಿನ್‌ಪಿಂಗ್ ಭಾರತಕ್ಕೆ: 2019ರಲ್ಲಿ ಭಾರತಕ್ಕೆ ಆಗಮಿಸುವಂತೆ ಜಿನ್‌ಪಿಂಗ್‌ರನ್ನು ಮೋದಿ ಆಹ್ವಾನಿಸಿದ್ದು, ಜಿನ್‌ಪಿಂಗ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.
ಮಹತ್ವದ ಒಪ್ಪಂದಗಳು
ಚೀನಾದಿಂದ ಭಾರತಕ್ಕೆ ಬ್ರಹ್ಮಪುತ್ರಾ ನದಿಯ ನೀರಿನ ಮಾಹಿತಿ ಹಂಚಿಕೊಳ್ಳುವ ಒಪ್ಪಂದಕ್ಕೆ ಈ ವೇಳೆ ಉಭಯ ದೇಶಗಳು ಸಹಿ ಹಾಕಿವೆ. ಅಲ್ಲದೆ, ಬಾಸ್ಮತಿ ಹೊರತಾದ ಅಕ್ಕಿಯೂ ಸೇರಿದಂತೆ ಎಲ್ಲ ಅಕ್ಕಿಯನ್ನೂ ಚೀನಾಗೆ ಭಾರತದಿಂದ ರಫ್ತು ಮಾಡುವು ದಕ್ಕಾಗಿ ಫೈಟೋಸಾನಿಟರಿ ನಿಯಮಾವಳಿ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.