ಹೊಸದಿಲ್ಲಿ : ಭಾರತ ಪದೇ ಪದೇ ಕೋರಿಕೊಂಡ ಹೊರತಾಗಿಯೂ ಜೈಶ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಶ್ವಸಂಸ್ಥೆಯ ಪ್ರಸ್ತಾವಕ್ಕೆ ಚೀನ ಮತ್ತೆ ಅಡ್ಡಗಾಲು ಹಾಕಿದೆ.
ವಿಶ್ವಸಂಸ್ಥೆಯಿಂದ ಮಸೂದ್ ಅಜರ್‌ನನ್ನು ಘೋಷಿತ ಭಯೋತ್ಪಾದಕನೆಂದು ಪರಿಗಣಿಸುವ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ನ ಪ್ರಸ್ತಾವದ ತಾಂತ್ರಿಕ ತಡೆಯನ್ನು ಚೀನ ಇನ್ನೂ ಮೂರು ತಿಂಗಳಿಗೆ ವಿಸ್ತರಿಸಿದೆ.
ಪಂಜಾಬ್‌ನ ಪಠಾಣ್‌ಕೋಟ್ ವಾಯು ನೆಲೆ ಮೇಲಿನ ಉಗ್ರ ದಾಳಿಯ ಸೂತ್ರಧಾರನಾಗಿರುವ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ.
ಚೀನ ಈ ವರ್ಷ ಫೆಬ್ರವರಿಯಲ್ಲಿ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಅಮೆರಿಕದ ಪ್ರಸ್ತಾವವನ್ನು ಚೀನ ತಡೆದಿತ್ತು. ಚೀನದ ಈ ಕ್ರಮದ ತಾಂತ್ರಿಕ ತಡೆಯ ಅಂತಿಮ ಗಡುವು ಆಗಸ್ಟ್ 2ನೇ ತಾರೀಕಿಗೆ ಕೊನೆಗೊಳ್ಳುವುದಿತ್ತು. ಅಂತೆಯೇ ಚೀನ ಇಂದು ಗುರುವಾರ ಈ ಗಡುವು ಮುಗಿಯುತ್ತಲೇ ಮತ್ತೆ ಮೂರು ತಿಂಗಳ ವಿಸ್ತರಣೆಯನ್ನು ಪ್ರಯೋಗಿಸಿದೆ.
ಹಾಗಾಗಿ ಈ ವರ್ಷ ನೆವೆಂಬರ್ 2ರ ತನಕ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಪ್ರಸ್ತಾವ ಬಾಕಿ ಉಳಿಯಲಿದೆ.