ಸಿದ್ದಾಪುರ: ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮೊಗೆ ಕುಮಿrಬೇರು ಎಂಬಲ್ಲಿ ರಾತ್ರಿ ತಾಯಿ ಜತೆಯಲ್ಲಿ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವನ್ನು ಗುರುವಾರ ಬೆಳಗ್ಗಿನ ಜಾವ ದುಷ್ಕರ್ಮಿಯೊಬ್ಬ ಕದ್ದೊಯ್ದಿದ್ದಾನೆ ಎನ್ನುವ ಪ್ರಕರಣ ತಿರುವು ಪಡೆದುಕೊಂಡಿದೆ. ಪುಟ್ಟ ಕಂದಮ್ಮ ಸಾನ್ವಿಕಾಳ ಮೃತದೇಹ ಮನೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿ ಕುಬಾj ನದಿಯ ಪೊದೆಗಳ ನಡುವೆ ಪತ್ತೆಯಾಗಿದ್ದು, ತಾಯಿ ರೇಖಾ ನಾಯ್ಕ ಹೇಳಿಕೆಯಲ್ಲಿಯೇ ಅನುಮಾನ ವ್ಯಕ್ತವಾಗುತ್ತಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್ ಅವರ ನೇತೃತ್ವದ ತನಿಖಾ ತಂಡ ರಚಿಸಿ, ತನಿಖೆಗೆ ಆದೇಶಿಸಿದ್ದರು.
ಗುರುವಾರ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಹೊಳೆಯಲ್ಲಿ ಹುಡುಕಾಡಿದರೂ ಮೃತ ದೇಹ ಪತ್ತೆಯಾಗಲಿಲ್ಲ. ಸ್ಥಳೀಯ ಯುವಕರು ಈ ಪ್ರಕರಣದ ಬಗ್ಗೆ ಅನುಮಾನಗೊಂಡು ಶುಕ್ರವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದರು. ಮನೆಯಿಂದ ಹೊಳೆಯ ಬದಿಯಲ್ಲಿ ಹುಡುಕಾಟ ಆರಂ ಭಿಸಿದರು. ಸುಮಾರು 2 ಕಿ.ಮೀ.ಹೆಚ್ಚು ದೂರ ಹೊಳೆಯ ಬದಿಯಲ್ಲಿ ಹುಡುಕಾಟ ನಡೆಸುತ್ತ ಸಾಗುತ್ತಿರುವಾಗ, ಕುಬ್ಜಾ ನದಿಯ ಕಲ್ಲುಗುಂಡಿ ತಿರುವಿನಲ್ಲಿ ಪೊದೆಯ ಮಧ್ಯೆ ಮೃತ ದೇಹ ಪತ್ತೆಯಾಗಿದೆ.
ತತ್‌ಕ್ಷಣ ಯುವಕರು ಶಂಕರನಾರಾಯಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿ ಮೃತ ದೇಹದ ಮಹಜರು ಮಾಡಿ, ಪೋಸ್ಟ್‌ಮಾರ್ಟಂಗೆ ಮಣಿಪಾಲದ ಆಸ್ಪತ್ರೆಗೆ ರವಾನಿಸಿದ್ದಾರೆ.ವರದಿಯನ್ನು ಆಧರಿಸಿ, ಮುಂದಿನ ತನಿಖೆಯನ್ನು ಕೈಕೊಳ್ಳಲಾಗುವುದು. ಇನ್ನು ಈ ಪ್ರಕರಣದಲ್ಲಿ ತಾಯಿಯ ಪಾತ್ರ ಏನು ಎನ್ನುವುದರ ಮೇಲೆ ಅವರನ್ನು ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಎಡಿಶನಲ್ ಎಸ್ಪಿ ಕುಮಾರ ಚಂದ್ರ ಅವರು ಉದಯವಾಣಿಗೆ ತಿಳಿಸಿದ್ದಾರೆ.