ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ ಇದರ ಆಶ್ರಯದಲ್ಲಿ ನಡೆದ ಆಳ್ವಾಸ್ ವಿದ್ಯಾರ್ಥಿ ಸಿರಿ -2018ರಲ್ಲಿ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಪೆರ್ಲ ಇಲ್ಲಿನ ಮಕ್ಕಳ ಮೇಳದ ಯಕ್ಷಗಾನ ಪ್ರದರ್ಶನಗೊಂಡಿತು. ಕೆ.ವಿ. ಸುಬ್ಬಣ ಬಯಲು ರಂಗಮಂದಿರದಲ್ಲಿ ಪ್ರದರ್ಶಿತವಾದ “ಅಭಿಮನ್ಯು ಕಾಳಗ’ ಪ್ರಸಂಗ ಕಲಾಪ್ರೇಮಿಗಳನ್ನು ರಂಜಿಸಿತು.
ಸುಬ್ಬಣಕೋಡಿ ರಾಮಭಟ್ಟರ ನಿರ್ದೇಶನದಲ್ಲಿ ನಡೆದ ಈ ಯಕ್ಷಗಾನ ಬಯಲಾಟಕ್ಕೆ ಪ್ರಸಾದ ಬಲಿಪರು ಭಾಗವತರಾಗಿ ಮಕ್ಕಳು ನಿರ್ವಹಿಸಿದ ಪಾತ್ರಗಳಿಗೆ ಜೀವ ತುಂಬಿದರು.ಚಂದ್ರಶೇಖರ ಭಟ್ ಕೊಂಕಣಾಜೆ ಹಾಗೂ ರಾಘವ ಬಲ್ಲಾಳ್ ಕಾರಡ್ಕ ಚೆಂಡೆ -ಮದ್ದಳೆಯಲ್ಲಿ ಉತ್ತಮ ಸಾಥ್ ನೀಡಿದರು. ಚಕ್ರತಾಳದಲ್ಲಿ ಕೇಂದ್ರದ ಹಳೆ ವಿದ್ಯಾರ್ಥಿಯೂ ಕಟೀಲು ಮೇಳದ ಯುವ ಪುಂಡು ವೇಷಧಾರಿಯೂ ಆದ ಶ್ರೀ ಶಿವಾನಂದ ಬಜಕೂಡ್ಲು ಸಹಕರಿಸಿದರು.
ಪರಂಪರೆಯ ಪಾಂಡವರ ಒಡ್ಡೋಲಗದ ಮೂಲಕ ಆರಂಭವಾದ ಯಕ್ಷಗಾನದಲ್ಲಿ ಧರ್ಮರಾಯನಾಗಿ ಕು| ಶ್ರಾವಣಿ ಕಾಟುಕುಕ್ಕೆ , ಭೀಮನಾಗಿ ಮಾ| ಸನತ್‌ರಾಜ್ ಇಡಿಯಡ್ಕ ಅರ್ಜುನನಾಗಿ ಕು| ಕೀರ್ತನಾ ಕೀರಿಕಾಡು, ನಕುಲ – ಸಹದೇವರಾಗಿ ಮಾ| ನಿರಂಜನ ಕಾರಡ್ಕ ಹಾಗೂ ಮಾ| ಹರ್ಷಲ್ ಮಾಯಿಲೆಂಗಿ ತಮ್ಮ ತಾಳ ಜ್ಞಾನವನ್ನು ಪರಂಪರೆಯ ಕ್ರಮವನ್ನು ತೋರಿಸಿಕೊಟ್ಟರು. ಪಾಂಡವರ ಸರ್ವನಾಶವನ್ನೇ ಪಣತೊಟ್ಟ ಕೌರವನಾಗಿ ಮಾ| ಚಿನ್ಮಯ ಕೃಷ್ಣ ಕಡಂದೇಲು ಹಾಗೂ ಗುರು ದ್ರೋಣಾಚಾರ್ಯನಾಗಿ ಮಾ| ಹರ್ಷ ಸಜಂಗದ್ದೆ ಉತ್ತಮ ಆರಂಭವನ್ನು ಕೊಟ್ಟರು. ತೆರೆ ಪರಪಟ್ಟು ಸಹಿತ ರಂಗಸ್ಥಳವೇರಿದ ಸಮಸಪ್ತಕರಾದ ಮಾ| ಅಜೇಯ ಸುಬ್ರಹ್ಮಣ್ಯ ಮೂಡಬಿದಿರೆ ಹಾಗೂ ಮಾ| ವೆಂಕಟ ಯಶಸ್ವಿ ಕಬೆಕ್ಕೋಡು ಬಣ್ಣದ ವೇಷದ ನಡೆಯನ್ನು ಉತ್ತಮವಾಗಿ ಕಲಾಪ್ರೇಕ್ಷಕರಿಗಿತ್ತರು. ಶ್ರೀ ಕೃಷ್ಣನಾಗಿ ಕು| ಭಾಗ್ಯ ಶ್ರೀ ಕುಂಚಿನಡ್ಕ ಉತ್ತಮ ಪ್ರದರ್ಶನ ನೀಡಿದರು.
ಅಭಿಮನ್ಯುವಾಗಿ ಮೊದಲಿಗೆ ರಂಗವೇರಿದ ಮಾ| ಚಿತ್ತರಂಜನ್ ಕಡಂದೇಲು ಬಹುಮುಖ ಪ್ರತಿಭಾವಂತ. ಉತ್ತಮ ನಾಟ್ಯ ಹಾಗೂ ಮಾತುಗಳಿಂದ ದೊಡ್ಡಪ್ಪನಿಂದ ಅಪ್ಪಣೆ ಪಡೆದು ಹೊರಟನಾದರೂ ತಾಯಿ ಸುಭದ್ರೆಯ ಮಾತೃ ವಾತ್ಸಲ್ಯದ ಕಟ್ಟುಪಾಡಿಗೆ ಒಳಗಾಗುವ ಸನ್ನಿವೇಶವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದರು. ಸುಭದ್ರೆಯಾಗಿ ಕು| ಸ್ಮತಿ ಮಾಯಿಲೆಂಗಿ ಮಾತೃತ್ವದ ಅಕ್ಕರೆಯನ್ನು, ಕಳೆದುಹೋಗುವ ಏಕಮಾತ್ರ ಪುತ್ರನ ಪುತ್ರ ಶೋಕವನ್ನು ಮನಮುಟ್ಟುವಂತೆ ಅಭಿನಯಿಸಿದರು.
ಮುಂದಿನ ಅರ್ಧ ವೀರಾವೇಶದ ಅಭಿಮನ್ಯುವಾಗಿ ಚುರುಕು ನಡೆಯ ಮಾ| ಸ್ವಸ್ತಿಕ್ ಶರ್ಮ ಉತ್ತಮ ದಿಗಿಣಗಳನ್ನು ಪ್ರದರ್ಶಿಸಿ ರಂಜಿಸಿದರು. ಸಾರಥಿಯಾಗಿ ಮಾ| ದತ್ತೇಶ್ ಮಾವಿನಕಟ್ಟೆ ದಿಗಿಣಗಳನ್ನು ಉಣಬಡಿಸಿದರು. ಕರ್ಣನಾಗಿ ಮಾ| ರೂಪೇಶ್, ಸೈಂಧವನಾಗಿ ಮಾ| ಸನತ್ ಇಡಿಯಡ್ಕ, ಕೋಟೆ ಬಲಗಳಾಗಿ ಮಾ| ನಿರಂಜನ ಕಾರಡ್ಕ, ಮಾ| ಹರ್ಷಲ್ ಮಾಯಿಲೆಂಗಿ ಹಾಗೂ ದುಶ್ಯಾಸನ, ಸುಃಸಳರಾಗಿ ಅವನಿಕಾ ಕಾಟುಕುಕ್ಕೆ ಮತ್ತು ಕು| ವೀಕ್ಷಿತಾ ಪೆರುವಾಯಿ ಪಾತ್ರ ನಿರ್ವಹಿಸಿದರು. ಲಕ್ಷಣ ಕುಮಾರನಾಗಿ ಕು| ಅಭಿ ಮೂಡಬಿದಿರೆ ಚುರುಕಾಗಿ ಪಾತ್ರ ವಹಿಸಿದರು.
ಬಾಲಕೃಷ್ಣ ಪೆರ್ಲ