Advertisement
ಆ. 16ರಂದು 86 ವರ್ಷ ತುಂಬಿದ್ದ ಅವರು ಪತ್ನಿ ವಸಂತಿ, ಮೂಡಬಿದಿರೆಯ ಲೆಕ್ಕ ಪರಿಶೋಧಕ ಪಿ. ರಘುಪತಿ ಭಟ್ ಸಹಿತ ನಾಲ್ವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಸೋಮವಾರ ಸಂಜೆ ಪಳಕಳದಲ್ಲಿರುವ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಮನೆ ತಲುಪಿದ ಎರಡು ಗಂಟೆಗಳಲ್ಲಿ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
Related Articles
Advertisement
ಸಮಾಜಸೇವೆ: ಸುಮಾರು ಎರಡು ದಶಕಗಳ ಕಾಲ ಊರಿನ ಸಹಕಾರಿ ಸಂಘದ ಕಾರ್ಯಕಾರಿ ಸಮಿತಿಯಲ್ಲಿದ್ದ ಪಳಕಳರು ಎರಡು ದಶಕಗಳ ಕಾಲ ಇಲ್ಲಿನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು. ಶಾಲೆಗೆ ಬೆಂಕಿ ಬಿದ್ದು ಅನಾಹುತವಾದಾಗ ತಾವೇ ಮುಂದಾಳಾಗಿ ನಿಂತು ಶಾಲೆಯನ್ನು ಕಟ್ಟಿಕೊಟ್ಟ ಘಟನೆ ಸ್ಮರಣೀಯ. ಜೀವಮಾನದ ಗಳಿಕೆ 1 ಲಕ್ಷ ರೂ.ಗಳೊಂದಿಗೆ ಪಳಕಳ ಪ್ರತಿಷ್ಠಾನ ರಚಿಸಿ ಬಡಮಕ್ಕಳಿಗೆ ನೆರವಾದವರು, ನಿವೇಶನ ರಹಿತ ನಾಲ್ಕು ಕುಟುಂಬಗಳಿಗೆ ತಲಾ ಐದು ಸೆಂಟ್ಸ್ ಮನೆ ನಿವೇಶನಗಳನ್ನು ಕೊಡುಗೆಯಾಗಿ ನೀಡಿದ್ದರು.
1980ರಲ್ಲಿ ರಾಜ್ಯ ಸರಕಾರದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದ ಅವರು ನಂತರ 1983-87ರ ಅವಧಿಯಲ್ಲಿ ಮಕ್ಕಳ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಸಕ್ರಿಯರಾಗಿ 1996ರ ಹಾಸನ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ, 2004ರಲ್ಲಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1998ರಲ್ಲಿ ಕಸಾಪದ ಮಕ್ಕಳ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿದ್ದರು. ಕಾಸರಗೋಡು ಸಹಿತ ಅವಿಭಜಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಮೊದಲ ಅಧ್ಯಕ್ಷರಾಗಿದ್ದರು. ಪ್ರಸಾರ ಭಾರತಿಯಿಂದ ಮಾನ್ಯತೆಯ ಕವಿಯಾಗಿದ್ದ ಅವರ ಕವನಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರದ ಪಠ್ಯಗಳಲ್ಲಿ, ಮಕ್ಕಳ ಮಾಣಿಕ್ಯ ಮೊದಲಾದ ಧ್ವನಿಸುರುಳಿಗಳ ಮೂಲಕ ಹೊರಹೊಮ್ಮಿವೆ.
ಕವಿಗೆ ಮನ್ನಣೆಡಾ| ಕಾತ್ಯಾಯಿನಿ ಕುಂಜಿಬೆಟ್ಟು ಅವರು ಡಾ| ಅಶೋಕ ಆಳ್ವರ ಮಾರ್ಗದರ್ಶನದಲ್ಲಿ ಮಣಿಪಾಲ ವಿ.ವಿ.ಗೆ ಸಲ್ಲಿಸಿದ “ಪಳಕಳ ಸೀತಾರಾಮ ಭಟ್ಟ ಅವರ ಸಮಗ್ರ ಕೃತಿಗಳು’ ಒಂದು ಅಧ್ಯಯನ’ ಎಂಬ ಪ್ರೌಢ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಗಳಿಸಿರುವುದು ಉಲ್ಲೇಖನೀಯ. ಕವಿಗೆ ಗೌರವ: ಮದ್ರಾಸು ಸರಕಾರದ ಮಕ್ಕಳ ಸಾಹಿತ್ಯ ಗೌರವ (1955), ಕಸಾಪದ ಜಿ.ಪಿ. ರಾಜರತ್ನಂ ದತ್ತಿ ಬಹುಮಾನ (1983), ಹೊಸದಿಲ್ಲಿಯ ಬಾಲ ಶಿಕ್ಷಕ ಪರಿಷತ್ ಪ್ರಶಸ್ತಿ (1987) ರಾಜ್ಯ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪುರಸ್ಕಾರ (1999), ಕೊ.ಅ. ಉಡುಪ ಪ್ರಶಸ್ತಿ, ಶಿವರಾಮ ಕಾರಂತ ಪ್ರತಿಷ್ಠಾನದ ಗೌರವ (2002), ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2003), ಕರ್ನಾಟಕ ಸಂಘ ಶಿವಮೊಗ್ಗದ ಮಕ್ಕಳ ಸಾಹಿತ್ಯ ಪ್ರಶಸ್ತಿ (2004), ಆಳ್ವಾಸ್ ನುಡಿಸಿರಿ ಪ್ರಶಸ್ತಿ (2005), 75ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಅಮೃತ ಮಹೋತ್ಸವ ಸಮ್ಮೇಳನದಲ್ಲಿ ಸಮ್ಮಾನ (2009), ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ (2010), ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಮಕ್ಕಳ ಸಾಹಿತ್ಯ ರತ್ನ’ ಗೌರವ, ಪುತ್ತಿಗೆ ಗ್ರಾ.ಪಂ. ಗೌರವ, ಮೂಡಬಿದಿರೆ ಪ್ರಸ್‌ಕ್ಲಬ್ ಗೌರವ ಸೇರಿದಂತೆ ಹಲವು ಮಾನ ಸಮ್ಮಾನಗಳು ಪಳಕಳರಿಗೆ ಸಂದಿವೆ. ಸಂತಾಪ: ಶಾಸಕ ಕೆ. ಅಭಯಚಂದ್ರ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಡಾ| ಎಲ್.ಸಿ. ಸೋನ್ಸ್, ಆಳ್ವಾಸ್ ಶಿಕ್ಷ ಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಕಸಾಪ ರಾಜ್ಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷದ ಭುವನಾಭಿರಾಮ ಉಡುಪ, ಮೂಡಬಿದಿರೆ ರೋಟರಿ ಅಧ್ಯಕ್ಷ ಶ್ರೀಕಾಂತ್ ಕಾಮತ್, ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು, ವೇ|ಮೂ| ಈಶ್ವರ ಭಟ್, ಕೆ.ಪಿ. ಜಗದೀಶ ಅಧಿಕಾರಿ, ಜೈನ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ, ಡಿ.ಜೆ. ವಿ.ವಿ. ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಹಾಗೂ ಪದಾಧಿಕಾರಿಗಳು, ಮೂಡಬಿದಿರೆ ಚದುರಂಗ ಸಂಗೀತ ಶಾಲೆ, ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಹುದ್ದರಿಗಳು ಪಳಕಳ ಸೀತಾರಾಮ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಅಂತ್ಯಸಂಸ್ಕಾರ
ಮೃತರ ಅಂತ್ಯ ಸಂಸ್ಕಾರ ಮಂಗಳವಾರ (ಸೆ. 26) ಪಳಕಳದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.