ಬಳ್ಳಾರಿ: ದೇಶದ ಅಮೂಲ್ಯ ಸಂಪತ್ತಾಗಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವವರೆಗೆ ಮಾನಸಿಕ ಅಡೆತಡೆಗಳಾಗುವಂತ ಕೆಲಸಗಳಲ್ಲಿ ತೊಡಗಿಸಬೇಡಿ. ಅವರನ್ನು ಪೋಷಿಸಿ ಮತ್ತು ಉತ್ತೇಜಿಸಿ ಸದೃಢರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಬಿ.ಬಿರಾದಾರ್ ಪೋಷಕರು ಮತ್ತು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ನ್ಯಾಯಾವಾದಿಗಳ ಸಂಘ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದ ಎಪಿಎಂಸಿ ಅಡಳಿತ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಸದೃಢ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ಅವರನ್ನು ಅಣಿಗೊಳಿಸಬೇಕಾದರೆ ಅವರಿಗೆ
ಬಾಲಕಾರ್ಮಿಕರಾಗಿ ದುಡಿಸಿಕೊಳ್ಳುವುದರ ಬದಲು ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಈ
ನಿಟ್ಟಿನಲ್ಲಿ ತಂದೆ-ತಾಯಿಗಳ ಮತ್ತು ಗುರು-ಹಿರಿಯರ ಜವಾಬ್ದಾರಿ ಬಹಳ ಇದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಬಂಧಿ ಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಾಗಲು ಸಾಧ್ಯ ಎಂದರು.
ಬಾಲಕಾರ್ಮಿಕ ವಿಶೇಷ ತರಬೇತಿ ಕೇಂದ್ರಗಳಲ್ಲಿ ಅಭ್ಯಾಸ ಮಾಡಿ 2017-18ನೇ ಪಿಯುಸಿ ಪರೀಕ್ಷೆಯಲ್ಲಿ ಪಾಸಾದ
ಪಾಂಡುರಂಗ ವಿಜ್ಞಾನ ವಿಭಾಗ ಶೇ.86, ಚೈತ್ರ ಶೇ.60.32, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ಎಚ್.ಕಾರ್ತಿಕಾ ಶೇ.85.44, ಎಚ್.ಉಪೇಂದ್ರ ಶೇ83.2, ರಘುನಾಯ್ಕ ಶೇ.77.28, ಎಂ.ಮಾರೇಶ ಶೇ.56.48, ಲ್.ಕುಮಾರಸ್ವಾಮಿ ಶೇ.56.32, ಕೆ.ವಿನಾಯಕ ಶೇ.50.08, ಜಿಪಿ.ಮಲ್ಲೇಶ 56.48, ಪಿ.ವಿಠಲ್ 58.08, ಎಚ್.ಪವನ್ ಕಲ್ಯಾಣ ಶೇ.70.04, ಕೆ.ಪಲ್ಲವಿ ಶೇ.71.52, ಎಚ್.ಕೊಟ್ರೇಶ್ 58.04, ಚಂದ್ರು ಶೇ.71 ಮತ್ತು ಐಟಿಐ ಪರೀಕ್ಷೆಯಲ್ಲಿ ಪಾಸಾದ ಮಹೇಶ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರತಿಜ್ಞಾ ವಿಧಿಯನ್ನು ಈ ಸಂದರ್ಭದಲ್ಲಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್, ಡಿಡಿಪಿಐ ಶ್ರೀಧರನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗೇಶ ಬಿಲ್ವಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷೀ , ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಜಿ.ಎಂ.ರವಿರಾಜಶೇಖರರೆಡ್ಡಿ, ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ತಹಶೀಲ್ದಾರ್ ಸಿ.ಎಸ್.ಭಂಗಿ, ಕಾರ್ಮಿಕ ನಿರೀಕ್ಷಕ ಧನಪಾಲ್ ನಾಯಕ್, ಸಿಡಿಪಿಒ ಮಹ್ಮದ್ ಸರ್ವರ್, ವಿವಿಧ ಶಾಲಾ ಮಕ್ಕಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ವಕೀಲ ಸಿ.ಎಂ. ಗುರುರಾಜ ಉಪನ್ಯಾಸ ನೀಡಿದರು.
ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಎ.ಮೌನೇಶ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು. ಇದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ನಿಮಿತ್ತ ಬಾಲಕಾರ್ಮಿಕ ಪದ್ಧತಿಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಡಿಸಿ ಕಚೇರಿಯಿಂದ ಆರಂಭವಾದ ಮೆರವಣಿಗೆಯು ಎಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಎಪಿಎಂಸಿಗೆ ತಲುಪಿತು. ಬಾಲಕಾರ್ಮಿಕ ಪದ್ಧತಿಯಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಮಕ್ಕಳಿಗೆ ಶಿಕ್ಷಣ ನೀಡಿದರೇ ಬದಲಿಸುವ ಬದುಕು ಕುರಿತು ಘೋಷವಾಕ್ಯಗಳನ್ನು ಹೊತ್ತ ಫಲಕಗಳು ಜಾಥಾದ ಉದ್ದಕ್ಕೂ ಗಮನ ಸೆಳೆದವು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಸದೃಢ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ಅವರನ್ನು ಅಣಿಗೊಳಿಸಬೇಕಾದರೆ
ಅವರಿಗೆ ಬಾಲಕಾರ್ಮಿಕರಾಗಿ ದುಡಿಸಿಕೊಳ್ಳುವ ಬದಲು ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಈ
ನಿಟ್ಟಿನಲ್ಲಿ ತಂದೆ-ತಾಯಿಗಳ ಮತ್ತು ಗುರು-ಹಿರಿಯರ ಜವಾಬ್ದಾರಿ ಬಹಳ ಇದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ.
ಎಂ.ಬಿ.ಬಿರಾದಾರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು.