ಬೆಂಗಳೂರು: ರಾಜ್ಯದಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಳ್ಳಲಾಗಿದೆ ಎನ್ನಲಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತಂತೆ ಹೈಕೋರ್ಟ್ ದಾಖಲಿಸಿ ಕೊಂಡಿರುವ ಸ್ವಯಂ ಪ್ರೇರಿತ ಹಾಗೂ ಬಚಪನ್ ಬಚಾವೋ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಪ್ರತ್ಯೇಕ 2 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್.ಓಕಾ ಹಾಗೂ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಪ್ರಮಾಣಪತ್ರ ಸಲ್ಲಿಸಿದ್ದಾರೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು ಡಿಜಿಪಿ ಸಲ್ಲಿಸಿದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದರು. ಅದರಲ್ಲಿ ರಾಜ್ಯದಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಂಡಿರುವ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಎಲ್ಲಿಯೂ ಅಂತಹ ಘಟನೆ ವರದಿಯಾಗಿಲ್ಲ. ಆದರೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ವರದಿ ಉಲ್ಲೇಖವಿಲ್ಲದೆ ಸಿಐಡಿ ವಿಭಾಗದ ಡಿಜಿಪಿ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಯಲಿದ್ದು, ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಹ 2019ರ ಡಿ.17ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೇಂದ್ರದ ವರದಿಯಲ್ಲಿನ ಆರೋಪಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು. ಕೇಂದ್ರದ ವರದಿಯಲ್ಲಿ ಹೇಳಿರುವ ಕೃತ್ಯ ನಡೆದಿಲ್ಲ ಎಂದು ಡೀಸಿಗಳೂ ವರದಿ ನೀಡಿದ್ದರು. ಎಫ್ಐಆರ್ ದಾಖಲಿಸಿ ತನಿಖೆ ನಡೆಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಬೇಕಿದೆ. ಅದರಂತೆ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಎಲ್ಲಿಯೂ ಅಂತಹ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.
ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಒಂದೇ ದಿನದಲ್ಲಿ ತನಿಖೆ ಮುಗಿಸಿ ವರದಿ ನೀಡಿರುವ ಪೊಲೀಸ್ ಅಧಿಕಾರಿಗಳ ನಡೆ ಬೇಜವಾಬ್ದಾರಿತನದಿಂದ ಕೂಡಿದೆ. ಸಿಆರ್‌ಪಿಸಿ ಸೆಕ್ಷನ್ 154(1) ಪ್ರಕಾರ ಯಾವುದೇ ಅಪರಾಧದ ಬಗ್ಗೆ ಮಾಹಿತಿ ಲಭ್ಯವಾದರೆ, ಆದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಬಹುದು. ಪೊಲೀಸರಿಗೆ ಈ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.
ಜತೆಗೆ, ಕೇಂದ್ರದ ವರದಿ ಹಾಗೂ ಹೈಕೋರ್ಟ್ ಸೂಚನೆ ನಿರ್ಲಕ್ಷಿಸಿ ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಲಾಗಿದೆ. ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿತು.