Advertisement
ಇತ್ತೀಚಿಗಂತೂ ರಾತ್ರಿ ಕನಸಿನಲ್ಲೂ ಕೋವಿಡೇ ಬರುತ್ತಿದೆ. ಅಕಸ್ಮಾತ್ ಕೋವಿಡ್ ಬಂದುಬಿಟ್ಟರೆ? ನನಗೆ ಬಂದರೆ ಪರವಾಗಿಲ್ಲ, ಆದರೆ ಮಕ್ಕಳು? “”ದೇವರೇ ಎಲ್ಲರನ್ನೂ ಚೆನ್ನಾಗಿಟ್ಟಿರು ತಂದೆ” ಎಂದು ಬೇಡುತ್ತೇನೆ. ಎಚ್ಚರವಾದಾಗ ದಿಗ್ಭ್ರಮೆ! ಒಂದಷ್ಟು ಹೊತ್ತು ಬೇಕಾಗುತ್ತದೆ ವಾಸ್ತವಕ್ಕೆ ಮರಳಲು. ಕಣ್ಣುಗಳು ತುಂಬಿಕೊಳ್ಳುತ್ತವೆ. ಆದರೆ ಇದು ಅಳುತ್ತಾ ಕೂರುವ ಸಮಯವಲ್ಲ. ವೈರಾಣುವಿನ ಮೇಲೆ ಸಮರ ಸಾರಬೇಕಾಗಿರುವ ಸಮಯ. ಹೋರಾಟ ಮಾಡಲೇಬೇಕಿದೆ ನಮ್ಮದೇ ಉಳಿವಿಗಾಗಿ. ವೈದ್ಯರು ಮತ್ತು ಸರ್ಕಾರದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಈ ಸೋಂಕಿನಿಂದ ಪಾರು ಮಾಡಿಕೊಳ್ಳಲು ಮನೆಯನ್ನು, ಅದರ ಜೊತೆಗೆ ನಮ್ಮನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದೆಲ್ಲ ದೊಡ್ಡವರಿಗೆ ಅರ್ಥವಾಗುತ್ತದೆ. ಆದರೆ ಮಕ್ಕಳು? ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಲು ಬೇಸರಿಸುವ ಅವರನ್ನು ಒಳಗೇ ಇಟ್ಟುಕೊಳ್ಳಲು ಒಂದಷ್ಟು ಕ್ರಿಯಾಶೀಲ ಚಟುವಟಿಕೆಗಳನ್ನು ಅವರಿಂದ ಮಾಡಿಸಬಹುದು.Related Articles
Advertisement
ಇಂತಹ ಸುದೀರ್ಘ ಮತ್ತು ಅನಿರ್ದಿಷ್ಟ ಕಾಲದ ಬಿಡುವು, ಒಂದೊಳ್ಳೆಯ ಓದಿಗೆ ಹೇಳಿಮಾಡಿಸಿದ ಸಮಯ. ಹಾಗಾಗಿ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಅಭಿರುಚಿಯನ್ನು ಬೆಳೆಸಬಹುದು. ಓದು ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ, ಅವರ ವ್ಯಕ್ತಿತ್ವಕ್ಕೆ ಪ್ರಬುದ್ಧತೆಯನ್ನೂ ತಂದುಕೊಡುತ್ತದೆ. ಹೊಸ ಹೊಸ ಶಬ್ದಗಳನ್ನೂ ಕಲಿಯುತ್ತಾ ಹೋಗು ತ್ತಾರೆ ಮಕ್ಕಳು. ಭಾಷಾ ಕೌಶಲ್ಯ ಹೆಚ್ಚಿ, ಅದು ಅವರ ಓದಿಗೂ ಪೂರಕವಾಗುತ್ತದೆ. ಕನ್ನಡ, ಇಂಗ್ಲಿಷ್, ಹಿಂದಿಯ ಜೊತೆಗೆ ಅವಕಾಶವಿದ್ದರೆ ಇನ್ನೂ ಬೇರೆ ಬೇರೆ ಭಾಷೆಗಳನ್ನು ಕಲಿಯಲು ಉತ್ತೇಜಿಸಬಹುದು. ಸದ್ಯದ ದಿನಗಳಲ್ಲಿ ಹೊರಗೆ ಹೋಗಿ ಆಡುವ ಅವಕಾಶ ಇಲ್ಲದಿರುವ ಕಾರಣ ಚೆಸ್, ಕೇರಂ, ಅಳಗುಳಿ ಮಣೆ, ಹಾವು-ಏಣಿ, ಚೌಕಾಭಾರ ದಂತಹ ಒಳಮನೆ ಆಟಗಳನ್ನು ಕಲಿಯಲು ಮತ್ತು ಆಡಲು ಉತ್ತೇಜಿಸಬಹುದು. ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿಯೇ ಯೋಗ, ಪ್ರಾಣಾಯಾಮ, ಏರೋಬಿಕ್ಸ್, ಪವರ್ ಯೋಗ…ದಂಥ ಚಟುವಟಿಕೆಗಳನ್ನು ರೂಢಿಸಿಕೊಂಡು, ಪ್ರತಿನಿತ್ಯ ನಿರ್ದಿಷ್ಟ ಅವಧಿಯಲ್ಲಿ ಮಾಡುವಂತೆ ಪ್ರೇರೇಪಿಸಬೇಕು. ನಾವೂ ಯೋಗ ಮಾಡುತ್ತಾ ಮಕ್ಕಳನ್ನೂ ಜೊತೆ ಸೇರಿಸಿಕೊಳ್ಳಬಹುದು.
ಮಕ್ಕಳು ಅತ್ಯಂತ ಕ್ರಿಯಾಶೀಲ ಪಾದರಸದಂತೆ. ಅವರ ಕ್ರಿಯಾಶೀಲತೆ, ಶಕ್ತಿ, ಸಾಮರ್ಥ್ಯವನ್ನು ಪೋಲಾಗಲು ಬಿಡಬಾರದು. ಅವರ ಪ್ರತಿಭೆ ಅರಳಲು ಪೂರಕವಾಗುವ ಅವಕಾಶಗಳನ್ನು ಒದಗಿಸಿದಾಗ, ಅದು ಸರಿ ಯಾದ ದಿಕ್ಕಿನಲ್ಲಿ ವಿಕಸನ ಹೊಂದುತ್ತದೆ. ಕೋವಿಡ್ ಕಾರಣಕ್ಕೆ ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ, ಪ್ರತಿ ಪೋಷಕರೂ ಮುತುವರ್ಜಿಯಿಂದ ತಮ್ಮ ಮಕ್ಕಳನ್ನು ನೋಡಿಕೊಳ್ಳಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ.
ಆಶಾ ಜಗದೀಶ್