ಕೆ.ಆರ್.ನಗರ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಸಮಾಜದಲ್ಲಿ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ. ಶಿಕ್ಷಕರ ವೃತ್ತಿ ಪವಿತ್ರವಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಂತರ ತಾಲೂಕು ಶಿಕ್ಷಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಜವಾಬ್ದಾರಿ ತಂದೆ- ತಾಯಿಗಳಿಗಿಂತ ಶಿಕ್ಷಕರ ಮೇಲೆ ಹೆಚ್ಚು ಇರುತ್ತದೆ. ಹೀಗಾಗಿ ಎಲ್ಲಾ ಶಿಕ್ಷಕರೂ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕು. ಅಲ್ಲದೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿಯೂ ಶಿಕ್ಷಕರು ಹೊಂದಿದ್ದು ಉತ್ತಮ ನಾಗರಿಕನಾಗಲು ಭದ್ರ ಬುನಾದಿ ಹಾಕಬೇಕೆಂದು ಹೇಳಿದರು.
ತಾನೂ ಒಬ್ಬ ಶಿಕ್ಷಕರ ಮಗನಾಗಿರುವುದರಿಂದ ಶಿಕ್ಷಕರ ಸಮಸ್ಯೆಗಳು ಏನು ಎಂಬುದು ಬೇಗ ಅರ್ಥವಾಗುತ್ತದೆ. ಹೀಗಾಗಿ ಶಿಕ್ಷಕರನ್ನು ತಾಲೂಕಿನಲ್ಲಿ ಗೌರವದಿಂದ ನಡೆಸಿಕೊಡು ಬರುತ್ತಿರುವುದಾಗಿ ಹೇಳಿದರು. ತಾಲೂಕಿನಲ್ಲಿ ವಾಸವಿದ್ದು ಬೇರೆ ಕಡೆ ವೃತ್ತಿಯಲ್ಲಿ ತೊಡಗಿರುವ ಶಿಕ್ಷಕರ ವತಿಯಿಂದ ಶಾಸಕ ಸಾ.ರಾ.ಮಹೇಶ್‌ರನ್ನು ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಸಾ.ರಾ.ಸ್ನೇಹಬಳಗದ ಅಧ್ಯಕ್ಷ ವಕೀಲ ವಿಜಯಕುಮಾರ್, ಮುಖಂಡರಾದ ಕೆ.ಪಿ.ಪ್ರಭುಶಂಕರ್, ವೀನಸ್ ಟೈಮ್ಸ್ ಪ್ರಕಾಶ್, ಮಹದೇವ್, ನಿವೃತ್ತ ಕನ್ನಡ ಪ್ರಾಧ್ಯಾಪಕ ಕೆ.ಆರ್.ಲಕ್ಕೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ರಾಜಶೇಕರ್, ಶಿಕ್ಷಕರಾದ ವಿವೇಕ್, ದಾಸಪ್ಪ, ಪ್ರಕಾಶ್ ಸೇರಿ ನೂರಾರು ಶಿಕ್ಷಕರಿದ್ದರು.
ಹಾಗೆಯೇ ಶಿಕ್ಷಕರು ಮತ್ತು ಮಾಧ್ಯಮದವರಿಗೆ ಸಮಾಜ ತಿದ್ದುವ ಜತೆಗೆ ಒಳ್ಳೆಯ ಸಂದೇಶ ಕೊಡಲು ಅವಕಾಶ ಇರುತ್ತದೆ. ಎಲ್ಲಿಯೂ ತಪ್ಪು ಮಾಹಿತಿ ನೀಡದೆ, ಎಚ್ಚರದಿಂದ ಕೆಲಸ ಮಾಡಬೇಕಾದ ಮಹತ್ತರ ಜವಾಬ್ದಾರಿಯಿದೆ.
-ಸಾ.ರಾ.ಮಹೇಶ್, ಶಾಸಕ