Advertisement

ವಿಷಜಂತುಗಳ ಭಯದಲ್ಲಿ ಮಕ್ಕಳ ಆಟ-ಪಾಠ

07:50 AM Mar 13, 2019 | Team Udayavani |

ಶಿಡ್ಲಘಟ್ಟ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ವಿಶೇಷವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಆದರೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಮತ್ತು ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿಯಿಂದ ತಾಲೂಕಿನ ಗಂಜಿಗುಂಟೆ ಸರ್ಕಾರಿ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳು ಆತಂಕದಲ್ಲಿ ಜ್ಞಾನರ್ಜನೆ ಮಾಡಿಕೊಳ್ಳುವ ಶೋಚನೀಯ ಪರಿಸ್ಥಿತಿ ಜೀವಂತವಾಗಿದೆ. 

Advertisement

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಗಂಜಿಗುಂಟೆ ಕೇಂದ್ರ ತಾಲೂಕಿನ ಗಡಿಭಾಗದಲ್ಲಿದ್ದು,  ತೀರಾ ಹಿಂದುಳಿದ ಕೇಂದ್ರವಾಗಿದೆ. ಮುಖ್ಯವಾಗಿ ಸರ್ಕಾರದ ನಿರ್ಲಕ್ಷ್ಯದಿಂದ ನಿರೀಕ್ಷಿತ ಅಭಿವೃದ್ಧಿ ಹೊಂದಿಲ್ಲವೆಂಬ ದೂರು ಸರ್ವೇ ಸಾಮನ್ಯವಾಗಿದೆ. ಈ ಮಧ್ಯೆ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿ ಜ್ಞಾನರ್ಜನೆ ಮಾಡಿಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ.

ಸರ್ಪಗಳ ಹಾವಳಿ: ಶಾಲೆಗೆ ಹೊಂದಿಕೊಂಡಂತೆ ಬೇಲಿಯ ಮರವಿದ್ದು, ಇಲ್ಲಿ ವಿಷ ಜಂತುಗಳಿಗೆ ಆವಾಸ ಸ್ಥಾನದಂತಾಗಿದೆ. ಕೆಲ ತಿಂಗಳುಗಳ ಹಿಂದೆ ಸರ್ಪವೊಂದು ಶಾಲೆ ಒಳಬಂದಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಸಮಯ ಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಶಾಲೆಯಲ್ಲಿ ಅಪರೂಪ ಅತಿಥಿಗಳಾಗುವ ಹಾವುಗಳನ್ನು ಸಾಯಿಸಿ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳು ಬಾಗಿಲು ನೋಡಿಕೊಂಡು ಪಾಠ ಕೇಳುವಂತ ಸ್ಥಿತಿ ನಿರ್ಮಾಣವಾಗಿದೆ. 

ಕಳಪೆ ಕಾಂಪೌಂಡ್‌ ಕಾಮಗಾರಿ: ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾಭಿವೃಧಿœ ನಿಧಿಯಿಂದ ಕಾಂಪೌಂಡ್‌ ನಿರ್ಮಿಸಲಾಗಿದೆಯಾದರೂ ಅದು ಕಳಪೆ ಕಾಮಗಾರಿಯಿಂದ ಇಂದು ಅಥವಾ ನಾಳೆ ಬೀಳುವ ಸ್ಥಿತಿಗೆ ತಲುಪಿದೆ. ಅಲ್ಲದೇ 2015-16 ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಕಾಂಪೌಂಡ್‌ ಸಹ ಕಳಪೆಯಾಗಿ ಮಾಡಲಾಗಿದ್ದು, ಅದು ಸಹ ಕುಸಿದು ಬೀಳುವ ಮಟ್ಟಕ್ಕೆ ತಲುಪಿದೆ.

ತಾಲೂಕಿನ ಗಡಿ ಪ್ರದೇಶವಾಗಿರುವ ಗಂಜಿಗುಂಟೆ ಗ್ರಾಮದಲ್ಲಿ ನಡೆಯುತ್ತಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 17 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕನ್ನಡ ಮತ್ತು ಉರ್ದು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಎರಡು ಪ್ರತ್ಯೇಕ ಕೊಠಡಿಗಳಿದ್ದು ಅದರಲ್ಲಿ ಇಬ್ಬರು ಶಿಕ್ಷಕರು ಪಾಠ ಮಾಡುತ್ತಾರೆ.
 
ನೆಲವೇ ಡೆಸ್ಕ್: ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಿದ್ದೇವೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದು ಅರಿವು ಮತ್ತು ಜಾಗೃತಿ ಮೂಡಿಸುತ್ತಾರೆ. ಆದರೆ ಗಂಜಿಗುಂಟೆ ಗ್ರಾಮದ ಉರ್ದು ಶಾಲೆಯಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ವ್ಯಾಸಂಗ ಮಾಡುವಂತಾಗಿದೆ.

Advertisement

ಗೋದಾಮಾಗಿರುವ ಶಾಲಾವರಣ: ಸರ್ಕಾರಿ ಶಾಲೆಯಲ್ಲಿ ಜ್ಞಾನರ್ಜನೆಗೆ ಪೂರಕವಾಗಿ ಪರಿಸರ ಇರಬೇಕು. ಆದರೆ ಶಾಲೆಯ ಆವರಣದಲ್ಲಿ ಕಲ್ಲುಗಳು ಮತ್ತು ಕುಡಿಯುವ ನೀರು ಪೂರೈಕೆ ಮಾಡುವ ಮಿನಿ ಟ್ಯಾಂಕ್‌ ದಾಸ್ತಾನು ಮಾಡಲಾಗಿದೆ. ಇದರಿಂದ ಶಾಲೆಯ ಪರಿಸರ ಹಾಳಾಗಿದ್ದು, ವಿಷಜಂತುಗಳಿಗೆ ಆಶ್ರಯತಾಣವಾಗಿದೆ.

ಬಿಇಒ ಪ್ರತಿಕ್ರಿಯೆ: ಗಂಜಿಗುಂಟೆಯ ಸರ್ಕಾರಿ ಶಾಲೆಯ ಕಾಂಪೌಂಡ್‌ ದುಸ್ಥಿತಿ ಕುರಿತು ಪ್ರತಿಕ್ರಿಯಿಸಿರುವ ಶಿಡ್ಲಘಟ್ಟ ತಾಲೂಕು ಬಿಇಒ ಶ್ರೀನಿವಾಸ್‌, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸುತ್ತೇವೆ. ಇನ್ನುಳಿದ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾರೆ. 

* ಎಂ.ಎ.ತಮೀಮ್‌ ಪಾಷ 

Advertisement

Udayavani is now on Telegram. Click here to join our channel and stay updated with the latest news.

Next