ಮಹಾನಗರ: ‘ಬೇಸಗೆಯಲ್ಲಿ ಒಣಕಡ್ಡಿಯಂತಿರುವ ಜಿಗಣೆ ಮಳೆಗಾಲ ಬಂದ ಕೂಡಲೇ ಮಣ್ಣಿನಡಿಯಿಂದ ಹೊರಬಂದು ಅಲ್ಲಿ ಓಡಾಡುವ ಪ್ರಾಣಿ ಅಥವಾ ಮನುಷ್ಯರ ರಕ್ತ ಹೀರತೊಡಗುತ್ತದೆ. ರಕ್ತ ಕುಡಿದು ಉಬ್ಬಿ ತಾನಾಗಿಯೇ ಕಳಚಿಕೊಳ್ಳುತ್ತದೆ. ಆದರೆ ಅಮ್ಮಾ ಅದು ಕಾಲು ಹತ್ತುವುದು ಗೊತ್ತೇ ಆಗುವುದಿಲ್ಲ..’ ಹೀಗೆ ಹೇಳುತ್ತಾ ಹೋದದ್ದು ಜಿಗಣೆಗೆ ಮೊದ ಮೊದಲು ಭಯಪಡುತ್ತಿದ್ದ ಮಕ್ಕಳು. ಆದರೆ ಆ ಅನುಭವವನ್ನು ಒಪ್ಪಿಕೊಂಡು ಅನುಭವಿಸತೊಡಗಿದಾಗ ಭಯ ಮಾಯ! ಇಂಥ ಎಷ್ಟೋ ಭಯಗಳಿಂದ (ಕತ್ತಲು, ಪ್ರಾಣಿ ಕೀಟ, ನೀರು, ಶಬ್ದ) ಮುಕ್ತವಾಗಲು ಬದುಕಿನ ಶಿಕ್ಷಣಕ್ಕೆ ಮಹತ್ವ ನೀಡುವ ಮಂಗಳೂರಿನ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರವು 40 ಮಕ್ಕಳನ್ನು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರ್ಕಳದ ಮಾಳ ಎಂಬ ಹಳ್ಳಿಯಲ್ಲಿ ಚಾರಣಕ್ಕೆ ಕರೆದೊಯ್ದಿತ್ತು.
ಮ್ಯೂಸಿಯಂನಂತಹ ಮನೆ
ಎಲ್ಲ ಶಾಲೆಗಳಲ್ಲಿ ರಜೆ ಮುಗಿದು ಪಾಠ ಪಠ್ಯಗಳ ಯಾಂತ್ರಿಕತೆಯಲ್ಲಿ ಮಕ್ಕಳು ಕಳೆದು ಹೋಗಿರುವಾಗ ಈ ಮಕ್ಕಳು ಮುಂದಿನ ಕಲಿಕೆಗೆ ಮಾನಸಿಕವಾಗಿ ತಯಾರಾಗಲು ಅಚಲ ನಿರ್ಧಾರ ತೆಗೆದುಕೊಳ್ಳಲಿಕ್ಕಾಗಿ ಜು. 3ರಿಂದ 8ರ ತನಕ ಕಾಡ ಮನೆಯಲ್ಲಿ ಕಳೆದರು. ಪಾರಂಪರಿಕ ವಿನ್ಯಾಸದ ಮನೆ, ಹಜಾರ, ನಡು ಅಂಗಳ, ವಿವಿಧ ರಾಜ್ಯಗಳಿಂದ ಸಂಗ್ರಹಿಸಿದ ಲೋಹ, ಕಾಷ್ಠ, ಮಣ್ಣಿನ ಶಿಲ್ಪಗಳು, ಬುಡಕಟ್ಟು ಜನಾಂಗದ ಚಿತ್ರಗಳು – ಹೀಗೆ ಅಪರೂಪದ ಮ್ಯೂಸಿಯಂನಂತಹ ಮನೆ ಅದು. ಶಿಬಿರದಲ್ಲಿ ಮುಂಜಾವಿನಲ್ಲಿ ಒಂದು ತಾಸು ಮೌನ, ವನಸಂಚಾರ, ಯೋಗ – ಪ್ರಾಣಾಯಾಮ. ಬಳಿಕ ಗೋಪಾಡ್ಕರ್, ಸುಮಾಡ್ಕರ್, ಮೂರ್ತಿ ನೀನಾಸಂ, ಪುರುಷೋತ್ತಮ ಅಡ್ವೆ ಅವರಿಂದ ವಿವಿಧ ಸೃಜನಶೀಲ ಚಟುವಟಿಕೆಗಳು ನಡೆದವು. ‘ಸುಮ್ಮನೆ ಮಾತನಾಡಿ’ ಎಂಬ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳು ನಿರ್ಭೀತರಾಗಿ ತೆರೆದುಕೊಳ್ಳುತ್ತಾ ಹೋದರು ಎನ್ನುತ್ತಾರೆ ಕೇಂದ್ರದ ಸುಮಂಗಲ ಕೃಷ್ಣಾಪುರ.
ಬದುಕಿನಲ್ಲಿ ಸವಾಲನ್ನು ಸ್ವೀಕರಿಸುವುದು, ಸ್ವಯಂ ಸ್ವಚ್ಛತೆ, ಪ್ರಶ್ನಿಸುವ ಕೌಶಲ, ಮೌನ ಆಚರಣೆ, ಸಂತಸ ಕಲಿಕೆ ಇತ್ಯಾದಿ. ಪ್ರತಿದಿನ ಹೊಸ ಟಾಸ್ಕ್ ಗಳು, ಸಂದರ್ಶನಗಳು, ಆಟಗಳಿದ್ದವು. ಸಾಹಿತಿ ಗುರುರಾಜ ಮಾರ್ಪಳ್ಳಿ ಅವರ ಕಿರು ಚಲನಚಿತ್ರದ ಶೂಟಿಂಗ್‌ನಲ್ಲೂ ಸ್ವರೂಪ ತಂಡ ಭಾಗವಹಿಸಿತು. ಗಾಂಧಿ ತಣ್ತೀದಂತೆ ಸರಳ ಜೀವನ ನಡೆಸುತ್ತಿರುವ ಬಿಹಾರದ ಕವಿ ರಮೇಶ್ ಬೆಳ್ಳೊರೆ ಹಾಗೂ ಪತ್ನಿ, ನರ್ಮದಾ ಆಂದೋಲನದ ಹೋರಾಟಗಾರ್ತಿ ವಿಜಯಾ ಅವರ ಸಂದರ್ಶನ, ಅವರ ಹಿಂದಿ ಕವಿತೆಗಳ ವಾಚನ – ಒಟ್ಟಿನಲ್ಲಿ ಹೊಸ ಅನುಭವ. ಮೂರನೇ ದಿನದ ನಾಲ್ಕು ಗಂಟೆಗಳ ಕಾಡಿನ ಟ್ರೆಕ್ಕಿಂಗ್ ಒಂದು ರೋಚಕ ಅನುಭವ. ಎಲ್ಲದಕ್ಕೂ ಹೆದರುತ್ತಿದ್ದ ಮಕ್ಕಳು ವನದ ವೈವಿಧ್ಯಕ್ಕೆ ಬೆರಗುಗೊಳ್ಳುತ್ತ ಕೆಸರಲ್ಲಿ ಜಾರಿದಾಗ, ಜಿಗಣೆ ಕಚ್ಚಿದಾಗ, ಮಳೆಯಲ್ಲಿ ಒದ್ದೆಯಾದಾಗಲೂ ಖುಷಿಪಡಲು ಕಲಿತರು ಎನ್ನುತ್ತಾರೆ ಅವರು.