ಧಾರವಾಡ: ಕಲ್ಪನೆಗೆ ಆಲೋಚನಾ ಶಕ್ತಿ ಸೇರಿದರೆ ಅದ್ಭುತ ಕವಿತೆ ಹೊರಹೊಮ್ಮಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಹೇಳಿದರು. ನಗರದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮ ಸಭಾಂಗಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ರಚನೆ ಒಂದು ತಪಸ್ಸು. ಅದನ್ನು ನಿರಂತರ ಅಧ್ಯಯನ, ಬರವಣಿಗೆ, ಹವ್ಯಾಸದ ರೂಢಿಯಿಂದಲೇ ಒಲಿಯುವುದು ಎಂದರು. ಮಕ್ಕಳಿಗಾಗಿ ಸಾಹಿತ್ಯ ರಚಿಸುವವರು ಅವರ ಮನಸ್ಸು ಅರಿಯಬೇಕು. ನಂತರ ಅವಳ ಮನಸ್ಸಿನ ಆಳಕ್ಕಿಳಿದು, ಭಾವನೆ, ಆಸೆ-ಆಕಾಂಕ್ಷೆ ಅರಿತು, ಮಕ್ಕಳಂತಾಗಿ ಸಾಹಿತ್ಯ ರಚಿಸಿದಾಗ ಮಕ್ಕಳಿಗೆ ರುಚಿಸುತ್ತದೆ.
ರಚಿಸುವ ಕವಿತೆ ವ್ಯಾಕರಣ, ಲಯಬದ್ಧವಾಗಿ ಇದ್ದಾಗ, ಭಾವ ತುಂಬಿ ಹಾಡಲು ಸಾಧ್ಯ ಎಂದರು. ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳು ಕಣ್ಣಿಗೆ ಗೋಚರಿಸಿದ ಹಾಗೂ ಗೋಚರಿಸದ ಕಲ್ಪನಾತೀತ ಸಾಹಿತ್ಯ ರಚಿಸುತ್ತಾರೆ. ಈ ವೇಳೆ ಮುಕ್ತವಾಗಿ ಅವರ ವಿಚಾರಗಳನ್ನು ಆಲಿಸುವ, ಆಸ್ವಾದಿಸುವ ಗುಣ ಮಕ್ಕಳ ಸಾಹಿತಿಗಳಿಗೆ ಇರಬೇಕು.
ಮಕ್ಕಳಲ್ಲಿ ಅಡಗಿರುವ ಭಾವನೆಗಳನ್ನು ಹೇಗೆ ಹೊರ ತೆಗೆಯಬೇಕು. ಅವರನ್ನು ಸಾಹಿತ್ಯ ಕೃಷಿಯ ಚಟುವಟಿಕೆಗೆ ಅಣಿಗೊಳಿಸಬೇಕು. ಅದರಲ್ಲೂ ಸರ್ಕಾರಿ, ಹಿಂದುಳಿದ ವರ್ಗಗಳ, ವಸತಿ ಶಾಲೆಗಳ ಮಕ್ಕಳ ಪ್ರತಿಭೆ ಗುರುತಿಸುವ ಉದ್ದೇಶದಿಂದ ಆಯ್ದ 40 ಜನರನ್ನು ಕಮ್ಮಟಕ್ಕೆ ಆಯ್ಕೆ ಮಾಡಿದೆ ಎಂದರು. ರಂಗ ನಿರ್ದೇಶಕಿ ಎಸ್. ಮಾಲತಿ ಮಾತನಾಡಿ, ಟಿವಿ, ಮೊಬೈಲ್‌ಗಳ ಪ್ರಭಾವದಿಂದ ಮಕ್ಕಳ ಬದುಕು ಸೊರಗುತ್ತಿದೆ.
ಅವರಿಗೆ ಸಂಸ್ಕೃತಿ, ಭಾಷೆ, ಮೌಲ್ಯಗಳು ಸಿಗುತ್ತಿಲ್ಲ. ವೇಗದ ಬದುಕಿನಿಂದ ನಮ್ಮಲ್ಲಿ ಚಿಂತನೆ ಹಾಗೂ ನಾನೇನು ಎಂಬ ಆತ್ಮವಿಮರ್ಶೆ ಸಹ ಇಲ್ಲವಾಗಿದೆ. ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವಾಡುತ್ತಿರುವ ಇಂದಿನ ಸಮಾಜದಲ್ಲಿ ಮಕ್ಕಳು ಉತ್ತಮವಾಗಿ ಬದುಕಲು ಸಾಧ್ಯವಿಲ್ಲ. ಸಂಪೂರ್ಣ ಕತ್ತಲೆ ಆವರಿಸಿರುವ ಸಂದರ್ಭದಲ್ಲಿ ಕಮ್ಮಟ ಎನ್ನುವಂತಹ ಸಣ್ಣ ಹಣತೆ ಹಚ್ಚುವ ಮೂಲಕ ಬೆಳಕು ಮೂಡಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಲ್ಲಿಕಾರ್ಜುನ ಮಾಲಿಗೇರ, ಸಾಹಿತಿಗಳಾದ ನಿಂಗಣ್ಣ ಕುಂಟಿ, ವಿವಿಧ ಜಿಲ್ಲೆಗಳ ಮಕ್ಕಳ ಸಾಹಿತಿಗಳು, ಇತರರು ಇದ್ದರು. ಕಮ್ಮಟ ನಿರ್ದೇಶಕ ಡಾ|ನಿಂಗು ಸೊಲಗಿ ಸ್ವಾಗತಿಸಿ, ನಿರೂಪಿಸಿದರು.