ಕಾರ್ಕಳ: ಅಮೃತ ಮಹೋತ್ಸವ ಆಚರಣೆಯ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು “ಅಮೃತ ಭಾರತಿಗೆ ಕನ್ನಡದ ಆರತಿ’ ಘೋಷಣೆ ಮುಂದಿರಿಸಿಕೊಂಡು ವರ್ಷವಿಡೀ ಕಾರ್ಯಕ್ರಮ ನಡೆಸುತ್ತಿದೆ. ಮಕ್ಕಳನ್ನು ಸಂಸ್ಕೃತಿ, ಬರಹದೆಡೆಗೆ ಪ್ರೇರೇಪಿಸಲು ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಸಮ್ಮೇಳನ ನಡೆಸಲಾಗುವುದು ಎಂದು ಸಚಿವ ಸುನಿಲ್‌ಕುಮಾರ್ ಹೇಳಿದರು.
ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2021ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಗಿರಿ ಪ್ರಶಸ್ತಿ, 2020ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.
ರಾಜ್ಯದ ಸಾಂಸ್ಕೃತಿಕ ಸಂಗತಿಗಳು, ಸ್ವಾತಂತ್ರ್ಯ ಹೋರಾಟಕ್ಕೆ ರಾಜ್ಯದ ಕೊಡುಗೆಗಳನ್ನು ದೇಶಕ್ಕೆ ಪರಿಚಯಿಸುವ ಬೃಹತ್ ಅಭಿಯಾನಕ್ಕೆ ಸಂಸ್ಕೃತಿ ಇಲಾಖೆ ಸಿದ್ಧವಾಗುತ್ತಿದೆ. ಮುಂದಿನ ಏಳೆಂಟು ತಿಂಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಹೊಸ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಲಿದೆ ಎಂದರು.
ಉ.ಕ. ಭಾಗದಲ್ಲಿ ದತ್ತಿನಿಧಿ ಸ್ಥಾಪನೆ: ರಂಗಾಯಣ ಕೇಂದ್ರ ಸ್ಥಾಪನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಯಕ್ಷಗಾನ-ನಾಟಕ ಎರಡಕ್ಕೂ ಪ್ರೋತ್ಸಾಹ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ದತ್ತಿನಿಧಿ ಸ್ಥಾಪಿಸಲಾಗುವುದು ಎಂದರು.
ಕರಾವಳಿಯಲ್ಲಿ ಯಕ್ಷಗಾನ ಮಹಾ ಸಮ್ಮೇಳನ: ಯಕ್ಷಗಾನಕ್ಕೆ ಅದರದೇ ಆದ ಘನತೆ, ಗೌರವವಿದೆ. ಈ ಕಾರಣಕ್ಕೆ ಸಿಎಂ ಜತೆ ಮಾತುಕತೆ ನಡೆಸಿ ಬಜೆಟ್‌ನಲ್ಲಿ ಯಕ್ಷಗಾನ ಸಮ್ಮೇಳನ ಸೇರಿಸಿಕೊಂಡಿದ್ದಾರೆ. ಇದನ್ನು ಕರಾವಳಿಯಲ್ಲೇ ನಡೆಸಲು ಕನ್ನಡ ಸಂಸ್ಕೃತಿ ಇಲಾಖೆ ಯೋಚಿಸಿದೆ ಎಂದು ಸಚಿವರು ಹೇಳಿದರು.
ಮಕ್ಕಳಿಗೆ ಶಾಲಾ ಹಂತದಲ್ಲಿ ಯಕ್ಷಗಾನ ಕಲೆಯನ್ನು ತಿಳಿಯಪಡಿಸಬೇಕು ಎಂದು ಮೂಡಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ಜಿ.ಎಲ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ. ನಿರ್ದೇಶಕಿ ಪೂರ್ಣಿಮಾ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಪೈ, ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್ ವೇದಿಕೆಯಲ್ಲಿದ್ದರು. ರಿಜಿಸ್ಟರ್ ಶಿವಾನಂದ ಪೈ ಪ್ರಸ್ತಾವನೆಗೈದರು. ಶ್ರೀನಿವಾಸ ಸಾಸ್ತಾನ ಸ್ವಾಗತಿಸಿ, ಕೆ.ಎಂ. ಶೇಖರ್ ನಿರ್ವಹಿಸಿದರು. ಯಕ್ಷಗಾನ ಅಕಾಡೆಮಿಯ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.