ವಿಶ್ವಸಂಸ್ಥೆ: ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ಮತ್ತು ಕಾಯಿಲೆ ಮುಂತಾದ ಅಸೌಖ್ಯತೆಯಿಂದ ಅವರು ಹೊರಬರಲು ಸಹಾಯವಾಗುವಂಥ ನಿರ್ಮಲ ಪರಿಸರವನ್ನು ಕಲ್ಪಿಸಿರುವ ವಿಶ್ವದ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಆದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇರುವಂಥ ಅವಕಾಶಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ 131 ಸ್ಥಾನ ಗಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ), ಮಕ್ಕಳ ನಿಧಿ (ಯೂನಿಸೆಫ್) ಹಾಗೂ ದ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಸಂಸ್ಥೆಗಳು ಜಂಟಿಯಾಗಿ ನಿಯೋಜಿಸಿರುವ ಆಯೋಗವೊಂದು ಈ ಕುರಿತಂತೆ ಕೈಗೊಂಡಿದ್ದ ಅಧ್ಯಯನ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ.
ನಿರ್ಮಲ ಪರಿಸರ: ನಿರ್ದಿಷ್ಟ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯು ದಿನವೊಂದಕ್ಕೆ ಸರಾಸರಿಯಾಗಿ ಉಸಿರಾಡುವ ಇಂಗಾಲದ ಪ್ರಮಾಣವನ್ನು ಆಧರಿಸಿ ನಾನಾ ದೇಶಗಳಲ್ಲಿನ ಪರಿಸರವನ್ನು ಅಳೆಯಲಾಗಿದೆ. ಮಾಲಿನ್ಯ ಮುಕ್ತ ಪರಿಸರದಿಂದ ಮಕ್ಕಳು ಹಾಗೂ ಹದಿಹರೆಯದವರು ಆರೋಗ್ಯವಂತರಾಗಿ ಬೆಳೆದು, ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಾರೆ ಎಂಬುದು ಸಂಶೋಧಕರ ವಾದ. ಈ ಪಟ್ಟಿಯ ಅಗ್ರಸ್ಥಾನಗಳಲ್ಲಿ ಬರುಂಡಿ, ಚಾದ್ ಹಾಗೂ ಸೊಮಾಲಿಯಾ ರಾಷ್ಟ್ರಗಳಿವೆ.
ಸರ್ವಾಂಗೀಣ ಅಭಿವೃದ್ಧಿ: ಸುರಕ್ಷಿತ ತಾಯ್ತನ, ಪೌಷ್ಟಿಕತೆ, ಕೈಗಾರಿಕಾ ಕ್ಷೇತ್ರದ ದುಷ್ಪರಿಣಾಮಗಳಿಂದ ದೂರವಿರುವುದು, ಉತ್ತಮ ಚಿಕಿತ್ಸಾ ಸೌಲಭ್ಯಗಳು, ಶಿಕ್ಷಣ – ಇವುಗಳ ಆಧಾರದ ಮೇಲೆ ಸರ್ವಾಂಗೀಣ ಅಭಿವೃದ್ಧಿಯನ್ನು ವ್ಯಾಖ್ಯಾನಿಸಲಾಗಿದೆ. ಈ ಪಟ್ಟಿಯಲ್ಲಿ ನಾರ್ವೆ, ದಕ್ಷಿಣ ಕೊರಿಯಾ, ನೆದರ್ಲೆಂಡ್ ರಾಷ್ಟ್ರಗಳು ಅಗ್ರ ಸ್ಥಾನದಲ್ಲಿವೆ.