Advertisement

ಗ್ರಾಪಂಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಲಿ: ರಾಘವೇಂದ್ರ

02:08 PM Apr 27, 2019 | Team Udayavani |

ಗದಗ: ಮಕ್ಕಳು ತಮ್ಮ ಬೇಡಿಕೆಗಳನ್ನು ಮಂಡಿಸಲು, ಅವರಿಗೆ ಸಂಬಂಧಪಟ್ಟ ವಿಷಗಳನ್ನು ಚರ್ಚಿಸಲು ಗ್ರಾ.ಪಂ.ಗಳಲ್ಲಿ ನಿಯಮಿತವಾಗಿ ಮಕ್ಕಳ ಗ್ರಾಮ ಸಭೆಗಳನ್ನು ಆಯೋಜಿಸುವುದು ಅಗತ್ಯವೆಂದು ಕೊಪ್ಪಳ ಯುನಿಸೆಫ್‌ ಮಕ್ಕಳ ರಕ್ಷಣಾ ಕಚೇರಿಯ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಗದಗ ಮತ್ತು ಯುನಿಸೆಫ್‌ ಹೈದರಾಬಾದ್‌ ಸಹಯೋಗದೊಂದಿಗೆ ‘ಸ್ಥಳೀಯ ಸ್ವಯಂ ಸರ್ಕಾರ ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆ’ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳು, ಅವುಗಳನ್ನು ರಕ್ಷಿಸಬೇಕಾದ ಅಗತ್ಯ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅದರ ಪಾತ್ರ, ಈ ನಿಟ್ಟಿನಲ್ಲಿ ಸ್ಥಳೀಯ ಸರ್ಕಾರಗಳು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರಗಳನ್ನು ನೀಡಿದ ಅವರು, ಮಾನವ ಅಭಿವೃದ್ಧಿ ಸೂಚ್ಯಾಂಕಗಳಲ್ಲಿ 68 ಸೂಚ್ಯಾಂಕಗಳು ಮಕ್ಕಳ ಅಭಿವೃದ್ಧಿಗೆ ಸಂಬಂಧಪಟ್ಟಿವೆ. ಆದ್ದರಿಂದ ಮಕ್ಕಳ ಅಭಿವೃದ್ಧಿಯಾಗದೇ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಯಾವುದೇ ಮಗು ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೆ, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದರೆ, ಆ ಮಗುವನ್ನು ಸಂಕಷ್ಟದ ಪರಿಸ್ಥಿತಿಯಿಂದ ಕಾಪಾಡಬಹುದು. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣಾ) ಕಾಯ್ದೆ, 2015 ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, ಗ್ರಾಮ ಪಂಚಾಯತಿಯ ಸ್ಥಾಯಿ ಸಮಿತಿಗಳು, ಅವುಗಳು ನಿರ್ವಹಿಸ ಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾವಿವಿ ಕುಲಸಚಿವ ಪ್ರೊ| ಡಾ| ಸುರೇಶ. ವಿ. ನಾಡಗೌಡರ, ಯುನಿಸೆಫ್‌ ಸಹಯೋಗದೊಂದಿಗೆ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಕೆಎಸ್‌ಆರ್‌ಡಿಪಿಆರ್‌ಯು, ಮಕ್ಕಳ ಹಕ್ಕುಗಳು ಮತ್ತು ಆಡಳಿತ ಕೋಶ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಈ ಕೋಶದಿಂದ ಕೈಗೊಳ್ಳಲು ಯೋಜಿಸಲಾದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

Advertisement

ವಿಶ್ವವಿದ್ಯಾಲಯವು ದತ್ತು ಪಡೆದುಕೊಂಡಿರುವ ಗ್ರಾಮಗಳಲ್ಲಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಅದರೊಂದಿಗೆ ಪಂಚಾಯತ್‌ ರಾಜ್‌ ಕಾಯ್ದೆಗೆ 2015ರಲ್ಲಿ ತಂದ ತಿದ್ದುಪಡಿಗಳು, ಮಾನವ ಅಭಿವೃದ್ಧಿ ಹಾಗೂ ಮಕ್ಕಳ ಅಭಿವೃದ್ಧಿ ಸೂಚ್ಯಾಂಕಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಕೊಪ್ಪಳದ ಯುನಿಸೆಫ್‌ ಮಕ್ಕಳ ರಕ್ಷಣಾ ಕಚೇರಿಯ ಹರೀಶ ಜೋಗಿ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಕುರಿತು ಮಾಹಿತಿ ನೀಡಿದರು. ಗೌರವ ಪ್ರಾಧ್ಯಾಪಕ ಶಿವಣ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಶೆಟ್ಟರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next