ಶಿಗ್ಗಾವಿ: ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಂದಲೇ ವ್ಯಾಪಾರ ಮಾಡುವ ವಾರದ ಸಂತೆ ನಡೆಯಿತು.
ಎಲ್‌ಕೆಜಿಯಿಂದ ಆರನೇ ತರಗತಿ ವರೆಗಿನ ಮಕ್ಕಳು ಗಾರ್ಡನ್‌ನ ರಾಜ್ ಹೋಟೆಲ್ ಆವರಣದಲ್ಲಿ ಚೀಲ ಹಾಸಿಕೊಂಡು ತಾವುತಂದ ಸಾಮಗ್ರಿ ಇಟ್ಟುಕೊಂಡು ಗ್ರಾಹಕರಾಗಿ ಬಂದ ತಮ್ಮ ಪೋಷಕರನ್ನು ಆಕರ್ಷಿಸಿ ವ್ಯಾಪಾರ ಮಾಡಿದರು.
ಪ್ರತಿವಾರ ಬುಧವಾರ ಶಿಗ್ಗಾವಿನಲ್ಲಿ ನಡೆಯುವ ವಾರದ ಸಂತೆಯಲ್ಲಿ ಲಭ್ಯವಿರುವ ಚೂಡಾ, ವಠಾಣಿ, ತರಕಾರಿ ಅಂಗಡಿ, ಹಣ್ಣಿನ ಅಂಗಡಿ, ತೆಂಗಿನಕಾಯಿ, ನಿಂಬೆ ಹಣ್ಣು, ಮೆಣಸಿನಕಾಯಿ, ತಿಂಡಿಗಳು, ಖಾರದ ಪುಡಿ, ಬೆಳೆ ಕಾಳುಗಳುದೇವರ ಪೂಜಾ ಸಾಮಗ್ರಿ ಅಂಗಡಿಗಳು, ಬಾಳೆಹಣ್ಣು ಅಂಗಡಿಗಳು, ತಂಪು ಪಾನೀಯಅಂಗಡಿಗಳು, ಹೋಟೆಲ್ (ಗಿರ್‌ಮಿಟ್, ಮಿರ್ಚಿ, ಖಾರ ಮಂಡಕ್ಕಿ) ಅಂಗಡಿಗಳು ಮಕ್ಕಳ ಸಂತೆಯಲ್ಲಿದ್ದವು.
ಶಾಲಾ ಮಕ್ಕಳು ಹಾಕಿದ 200 ಅಂಗಡಿಗಳಲ್ಲಿ ಪೋಷಕರು, ಪ್ರವಾಸಿಗರು ವ್ಯಾಪಾರ ಮಾಡಿದರು. ತಮ್ಮ ಮಕ್ಕಳನ್ನು ಬಿಟ್ಟು ಆತನ ಸಹಪಾಠಿಗಳಅಂಗಡಿಗಳಿಂದ ಪೋಷಕರು ತಮಗೆ ಬೇಕಾದ ಸಾಮಗ್ರಿ ಖರೀದಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದುದು ಕಂಡು ಬಂತು. ತಮ್ಮ ಶಿಕ್ಷಕರ ಅಣತಿಯಂತೆ ಹೆಚ್ಚಿನ ವ್ಯಾಪಾರ ಮಾಡುವ ಹುಮ್ಮಸ್ಸಿನಲ್ಲಿದ್ದ ಮಕ್ಕಳು ಸಂತೆಗಳಲ್ಲಿ ಅಂಗಡಿಯವರು ತೊಡುವ ಪೋಷಾಕುಗಳನ್ನು ಧರಿಸಿದ್ದು, ಪೋಷಕರ ಮೊಗದಲ್ಲಿ ನಗು ಚಿಮ್ಮಿಸಿತ್ತು. ಒಬ್ಬ ತಲೆಗೆ ಟಾವೆಲ್ ಸುತ್ತಿಕೊಂಡು ಒಳವಸ್ತ್ರ ಕಾಣುವಂತೆ ಲುಂಗಿ ಮೇಲೆತ್ತಿದ್ದರೆ, ಮತ್ತೂಬ್ಬಹೆಗಲ ಮೇಲೆ ಹಾಕಿಕೊಂಡ ಟಾವಲ್‌ನಿಂದಬೆವರು ಒರೆಸುತ್ತ ಗ್ರಾಹಕರನ್ನು ಏರು ಧ್ವನಿಯಲ್ಲಿ ಕರೆಯುತ್ತಿದ್ದ. ಉಳಿದವರು ತಲೆ ತೆಗ್ಗಿಸಿಕೊಂಡು ತಾವು ಮಾಡಿದ ವ್ಯಾಪಾರದ ಹಣವನ್ನು ಲೆಕ್ಕ ಮಾಡುತ್ತಿದ್ದರು. ವಾರದ ಸಂತೆಯಲ್ಲಿ ಕಾಣುವ ಸಮಾನ್ಯ ದೃಶ್ಯಗಳು ಮರುಕಳಿಸುವಂತೆ ಮಾಡಿದ್ದರು.