ಬೆಂಗಳೂರು: ಸದಾ ಪೊಲೀಸ್ ಬೂಟುಗಳ ಸದ್ದು ಕೇಳಿ ಬರುತ್ತಿದ್ದ ಸ್ಥಳದಲ್ಲಿ ಮಕ್ಕಳ ಕಲರವ… ಖಾಕಿಯ ಭಯವಿಲ್ಲದೆ ನಾನಾ ವೇಷದಲ್ಲಿ ಕುಣಿದು ಕಪ್ಪಳಿಸಿದ ಮಕ್ಕಳು… ಪುಟಾಣಿ ಪೊಲೀಸ್ ಅಧಿಕಾರಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಸೆಲ್ಯೂಟ್… ಇವೆಲ್ಲ ಕಂಡು ಬಂದಿದ್ದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ. ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ನಗರ ಪೊಲೀಸ್ ಮತ್ತು ಪರಿಹಾರ ತಂಡದ ಸಹಯೋಗದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ “ಮಕ್ಕಳ ಜಾತ್ರೆ’ ಆಯೋಜಿಸಲಾಗಿತ್ತು.
ಜಾತ್ರೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲೆಯ ಮಕ್ಕಳು, ಟಿಪ್ಪು, ಗಾಂಧೀಜಿ, ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ರಾಣಿ ಚೆನ್ನಮ್ಮ, ಪೊಲೀಸ್ ಅಧಿಕಾರಿ, ಸೈನಿಕನ ವೇಷಧರಿಸಿ ಪೊಲೀಸ್ ಸಿಬ್ಬಂದಿಯಿಂದ ಮೆಚ್ಚುಗೆಗಳಿಸಿದರು. ಸ್ಕೆಟಿಂಗ್, ಜಾರುಬಂಡೆ ಸೇರಿ ನಾನಾ ಆಟಗಳಲ್ಲಿ ಪಾಲ್ಗೊಂಡು ಎಲ್ಲರನ್ನು ನಗಿಸಿದರು.
ಗ್ರಾಮೀಣ ಸೊಗಡು: ಪೊಲೀಸ್ ಆಯುಕ್ತರ ಕಚೇರಿ ಆವರಣವೇ ಗ್ರಾಮೀಣ ಸೊಗಡು ಹಾಗೂ ಜಾನಪದ ಕಲೆಗಳಿಂದ ತುಂಬಿಕೊಂಡಿತ್ತು. ಪರಿಹಾರ ಕೇಂದ್ರ ಹಾಗೂ ಆಯುಕ್ತರ ಕಚೇರಿ ಕಟ್ಟಡದ ಮುಂಭಾಗ ಹಸಿರು ತೋರಣಗಳಿಂದ ಕಂಗೊಳಿಸಿತ್ತು. ಕಾರ್ಯಕ್ರಮ ದಲ್ಲಿ ಜಾನಪದ ಕಲೆಗಳಿಗೂ ಆದ್ಯತೆ ನೀಡಲಾಗಿತ್ತು. ಮಕ್ಕಳೇ ವೀರಗಾಸೆ, ಬೊಂಬೆ ಕುಣಿತ ಸೇರಿ ನಾನಾ ಜಾನಪದ ಪ್ರಕಾರಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಅಲ್ಲದೇ, ಪೋಷಕರ ಜತೆ ಬಳೆ ವ್ಯಾಪಾರ,ರಾಗಿ ಕಣ ಹಾಗೂ ಮಿಠಾಯಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿದರು. ಐಸ್ ಕ್ಯಾಂಡಿ, ಬಾಂಬೆ ಮಿಠಾಯಿ ಸೇರಿ ಮುಂತಾದ ಸಿಹಿ ತಿನಿಸು ಸವಿದರು. ಗ್ರಾಮೀಣ ಸೊಗಡಿನ ಸೂಚಕವೆಂಬಂತೆ ನಾಲ್ಕೈದು ಗುಡಿಸಲು ಕೂಡ ಹಾಕಲಾಗಿತ್ತು.
ನಟ ಯಶ್‌ರಿಂದ ಚಾಲನೆ: ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ಯಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೆಲ ಹೊತ್ತು ಮಕ್ಕಳ ಜತೆ ನಲಿದರು. ನಂತರ ಒಳಾಂಗಣ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರನ್ನು ಕಂಡರೆ ಮಕ್ಕಳು ಭಯ ಬೀಳುವಂತ ಸ್ಥಿತಿಯನ್ನು ಪೋಷಕರೇ ನಿರ್ಮಾಣ ಮಾಡುತ್ತಿದ್ದಾರೆ. ಮಕ್ಕಳು ಊಟ ಮಾಡದಿದ್ದರೆ ಪೊಲೀಸರನ್ನು ಕರೆಸುವುದಾಗಿ ಬೆದರಿಸುತ್ತಾರೆ. ಮಕ್ಕಳಿಗೆ ಪೊಲೀಸರ ಧೈರ್ಯ, ಸಾಹಸ ಗಾಥೆಗಳನ್ನು ಹೇಳಬೇಕು. ಅದರಿಂದ ಮಕ್ಕಳಲ್ಲಿ ಧೈರ್ಯ ಹೆಚ್ಚಾಗಿ, ಆತ್ಮವಿಶ್ವಾಸ ಮೂಡುತ್ತದೆ. ಎಲ್ಲ ಸಮಸ್ಯೆ ಗಳಿಗೆ ಕಾನೂನಿನ ಅಡಿಯಲ್ಲಿ ಪರಿಹಾರ ಸಿಗುವುದಿಲ್ಲ. ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ ಬದುಕು ಕಟ್ಟಿಕೊಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಪರಿಹಾರ ಸಹಾಯವಾಣಿ ಕೇಂದ್ರ ಕೆಲಸ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಚಾರ ನಿಯಮ ಪಾಲಿಸಿ: ಸಂಚಾರ ನಿಯಮ ಕಟ್ಟುನಿಟ್ಟಿನ ಪಾಲನೆ ಯಾಗ ಬೇಕು. ಮಾದಕ ವಸ್ತು ಸೇವನೆ, ಬಾಲ ಕಾರ್ಮಿಕ ಪದ್ಧತಿ ಸೇರಿ ಮುಂತಾದ ಗಂಭೀರ ಸ್ವರೂ ಪದ ಸಮಸ್ಯೆಗಳನ್ನು ಕೊನೆಗಾಣಿಸಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಅಗತ್ಯ ಬಿದ್ದರೆ ಕೈ ಜೋಡಿಸುವುದಾಗಿ ಪೊಲೀಸರಿಗೆ ಯಶ್ ಭರವಸೆ ನೀಡಿದರು.
ಕಾರ್ಯಕ್ರಮ ದಲ್ಲಿ ನಗರ ಪೊಲೀಸ್ಆ ಯುಕ್ತ ಭಾಸ್ಕರ್‌ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್, ಸಿಸಿಬಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿ ಕಾಂತೇ ಗೌಡ, ಪರಿಹಾರ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ, ಹಿರಿಯ ಮಕ್ಕಳ ತಜ್ಞೆ ಡಾ. ಚಂದ್ರಿಕಾ ರಾವ್, ಡಿಸಿಪಿ ಈಶಾ ಪಂತ್ ಸೇರಿ ಹಲವು ಗಣ್ಯರು ಇದ್ದರು