ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರಸಿದ್ಧ ರಂಗಕರ್ಮಿ ಐ.ಕೆ. ಬೊಳೂವಾರು ರಚಿಸಿದ ಗ್ರಹಣ ಕಂಟಕ ಎನ್ನುವ ನಾಟಕವನ್ನು ಮಕ್ಕಳು ಪ್ರಸ್ತುತಪಡಿಸಿದರು.
ಡಿ.2ರಂದು ಸಂಭವಿಸಿದ ಕಂಕಣ ಸೂರ್ಯಗ್ರಹಣದ ಆಗುಹೋಗುಗಳ ಬಗ್ಗೆ ಜನರ ನಂಬಿಕೆ, ಅಪನಂಬಿಕೆ, ಪ್ರಶ್ನಿಸುವ ಮನೋಭಾವ, ಅರಿವಿನ ವಿಸ್ತಾರದ ಕುರಿತು ಮಕ್ಕಳು ಇಲ್ಲಿ ನಮ್ಮೊಡನೆ ಮಾತನಾಡುತ್ತಾರೆ. ಗ್ರಹಣ ಸಂಭವಿಸಲು ಇರುವ ಪೌರಾಣಿಕ ಕಾರಣ ಮತ್ತು ವೈಜ್ಞಾನಿಕ ಕಾರಣಗಳನ್ನು ಮುಖಾಮುಖೀಯಾಗಿಸುತ್ತಾರೆ.
ಇವೆಲ್ಲ ಸಂಗತಿಗಳನ್ನು ಜನಪದ ಕಥಾ ಹಿನ್ನಲೆಯಲ್ಲಿ ಅದೇ ಹಂತದಲ್ಲಿ ಹೇಳುತ್ತಾ ಹೋಗುತ್ತಾರೆ. ರಾಜ (ಲವೀಶ್) ತನ್ನ ಅರಮನೆಯಲ್ಲಿ ತುರ್ತು ಸಭೆ ಕರೆದು ಮುಂಬರುವ ಗ್ರಹಣ ಕಂಟಕದ ಬಗ್ಗೆ ಜನಾಭಿಪ್ರಾಯ, ವೈಜ್ಞಾನಿಕ ಅಭಿಪ್ರಾಯದ ಕುರಿತು ಚರ್ಚೆ ಮಾಡುವಾಗ, ಒಬ್ಬ ಗುರು ಗ್ರಹಣದ ವಿಚಾರವಾಗಿ ಜನಾಭಿಪ್ರಾಯ ವಿರುದ್ಧ ಮಾತನಾಡುವುದನ್ನು ಕೇಳಿ ಅವನನ್ನು ಬಂಧಿಸಬೇಕೆಂದು ಮಂತ್ರಿ ಹೇಳುತ್ತಾನೆ.
ಇತ್ತ ಗುರು ತನ್ನ ಶಿಷ್ಯರೊಂದಿಗೆ ಪಾಠ ಪ್ರವಚನಗಳನ್ನು ಮಾಡುತ್ತಾ ಗ್ರಹಗಳು ತಮ್ಮ ಕಕ್ಷೆಯಲ್ಲಿ ತಿರುಗುವಾಗ ಆಗುವ ಪ್ರಕ್ರಿಯೆ ಸೂರ್ಯಗ್ರಹಣ, ಚಂದ್ರಗ್ರಹಣ ಎಂದು ಹೇಳುತ್ತಾನೆ. ಅರಸ ಮತ್ತು ಗುರುವಿನ ನಡುವೆ ವೈಜ್ಞಾನಿಕ ಸಂಘರ್ಷ ಉಂಟಾಗುತ್ತದೆ. ಅರಸನ ನಂಬಿಕೆಯ ವಿಷಯವನ್ನು ಎತ್ತಿ ಹಿಡಿದು ಹೆಚ್ಚಿನ ಜನಸಾಮಾನ್ಯರು ಇಂಥ ಸಂಪ್ರದಾಯಗಳಿಗೆ ಕಟ್ಟುಬೀಳುವುದರಿಂದ ಅರಸ ಜನರಿಗೆ ಬೆಂಬಲ ನೀಡಿ ಗುರುವನ್ನು ವಿಚಾರಣೆಗೆ ಒಳಪಡಿಸುತ್ತಾನೆ.
ಗುರುಗಳ ಶಿಷ್ಯರು ಅರಮನೆಗೆ ಬಂದು ಪ್ರತಿಭಟಿಸುತ್ತಾರೆ. ರಂಗದಲ್ಲಿ ಸೂರ್ಯ, ಭೂಮಿ, ಚಂದ್ರ ತಮ್ಮ ಕಕ್ಷೆಯಲ್ಲಿ ಸುತ್ತುವುದನ್ನು ತೋರ್ಪಡಿಸುವುದನ್ನು ನೋಡುವುದೇ ಚಂದ. ಕೊನೆಗೆ ರಾಜ, ಮಂತ್ರಿಗಳು ಜನಾಭಿಪ್ರಾಯಕ್ಕೆ ಸೋತು ಮಂತ್ರಿಯನ್ನು ಹಿಡಿದು ಜೈಲಿನಲ್ಲಿಟ್ಟು ಅವನ ನಾಲಿಗೆಯನ್ನು ಕತ್ತರಿಸಿ ಮಾತನಾಡದ ಹಾಗೆ ಮಾಡುತ್ತಾರೆ.
ಇಲ್ಲಿ ನಮಗೆ ಕಾಡುವುದು ಕೆಲವು ಶತಮಾನದ ಹಿಂದೆ ಗೆಲಿಲಿಯೊಗೆ ಇದೇ ರೀತಿ ಅಳುವವರು ವಿಷಪ್ರಾಸನ ಮಾಡಿದ ನೆನಪು ಮತ್ತು ಇತ್ತೀಚೆಗೆ ಗ್ರಹಣವಾದಾಗ ಈ 21ನೇ ಶತಮಾನದಲ್ಲಿಯೂ ಜನ ಕುಲಬುರ್ಗಿಯಲ್ಲಿ ಮಕ್ಕಳನ್ನು ಕೆಸರಿನಲ್ಲಿ ಹೂತ ಪ್ರಕರಣ. ಹೀಗೆ ಈ ನಾಟಕ ಸಂಘರ್ಷದೊಂದಿಗೆ ಒಟ್ಟು ಪಾಠದಂತಿದೆ.
ರಾಜನಾಗಿ ಲವೀಶ್, ಕಾಂತಣ್ಣ – ಸಮರ್ಥ್, ಮಂತ್ರಿ – ವಿಜಯ, ಸೈನಿಕನಾಗಿ ಸಿದ್ದು, ಕುಶಕುಮಾರ್, ದುಗೇìಶ್, ಸೇವಕರಾಗಿ ಗಣೇಶ್, ಪ್ರಿತೇಶ್, ಯಶಸ್ವಿ, ಮಕ್ಕಳಾಗಿ ಮಂಜುನಾಥ, ಜಾವೇದ್, ಲಿಖೀತ್, ಪವಿತ್ರ ಅಫಿಯಾ, ಸಾನಿಯಾ, ಮಳೆ – ಶೃತಿ, ದೀಕ್ಷಾ, ಲವಿಣ, ಅನ್ವಿತಾ ಪೂಜಾರಿ, ಸೂರ್ಯ – ದೀಕ್ಷಾ, ಚಂದ್ರ -ಸಾನ್ವಿ, ಭೂಮಿ-ರಶ್ಮಿ, ರಾಹು – ಲವಿಕಾ, ಕೇತು – ಅನ್ವಿತಾ ಪೂಜಾರಿ, ಅಭಿ ನ ಯಿ ಸಿ ದರು. ಇಂಪಾದ ಹಾಡು, ನೃತ್ಯ ಪೂರಕವಾಗಿ ಮೂಡಿಬಂದಿದೆ. ವಿನ್ಯಾಸ ಮತ್ತು ನಿರ್ದೇಶನ ಉದ್ಯಾವರ ನಾಗೇಶ್‌ಕುಮಾರ್.
ಜಯರಾಂ ನೀಲಾವರ