ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆಯು ಕಳೆದ ಶನಿವಾರ ನವಿಮುಂಬಯಿ ನೆರೂಲ್‌ನಲ್ಲಿರುವ ಹಿರಿಯ ನಾಗರಿಕರ ವಾಸ ತಾಣ “ಆಶ್ರಯ’ದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎರಡು ವರ್ಷದವರೆಗಿನ ಮಕ್ಕಳಿಗಾಗಿ “ಆರೋಗ್ಯಯುತ ಮಗು ಸ್ಪರ್ಧೆ’, ಎರಡರಿಂದ ಮೇಲ್ಪಟ್ಟ ಚಿಣ್ಣರು ಮತ್ತು ಮಕ್ಕಳಿಗಾಗಿ ಗುರಿ ಎಸೆತ, ಶಿಶುಗೀತೆಗಳು, ಶ್ಲೋಕ ಪಠನೆ, ಚಿತ್ರಕಲೆ, ರಸಪ್ರಶ್ನೆ, ನೃತ್ಯ, ಛದ್ಮವೇಷ ಇತ್ಯಾದಿ ಹಲವಾರು ಸ್ಪರ್ಧೆಗಳನ್ನು ಯುವ ವಿಭಾಗವು ಆಯೋಜಿಸಿತ್ತು. ಸ್ಪರ್ಧೆಗಳ ತೀರ್ಪುಗಾರರಾಗಿ ಆಶಾ ಭಟ್, ಜಯಾ ಹೊಳ್ಳ, ಪ್ರೇಮಾ ರಾವ್, ಭೂಮಿಕಾ ಥಾಪರ್, ಕೃಷಾ ಕುರುಪ್, ಜನೆಟ್ ಡಿಕ್ರೂಜ್, ಡಾ| ಪ್ರಮೋದ್ ಧನವಡೆ, ಡಾ| ಗಿರೀಶ್ ಕುಲಕರ್ಣಿ, ವಿ. ಕೆ. ಸುವರ್ಣ ಹಾಗೂ ರವಿ ಆಚಾರ್ಯ ಅವರು ಸಹಕರಿಸಿದರು.
ಕೊನೆಯಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್, ಉಪಾಧ್ಯಕ್ಷ ವಾಮನ್ ಹೊಳ್ಳ ಮತ್ತು ಇತರ ಪದಾಧಿಕಾರಿಗಳು ವಿಜೇತ ಮಕ್ಕಳಿಗೆ ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಿ ಶುಭ ಹಾರೈಸಿದರು. ಪ್ರೇಮಾ ರಾವ್ ಅವರ ಗಣೇಶ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಹರಿದಾಸ್ ಭಟ್ ಅವರು ವಿಜೇತ ಮಕ್ಕಳ ಯಾದಿ ವಾಚಿಸಿದರು.
ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪುಟಾಣಿಗಳನ್ನು ಪ್ರೋತ್ಸಾಹಿಸಿದರು. ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್, ಪ್ರಶಾಂತ್ ಹೆರ್ಲೆ ಮತ್ತು ಚೈತ್ರಾ ಪೋತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ- ವರದಿ: ರೊನಿಡಾ ಮುಂಬಯಿ.