Advertisement

ಮಕ್ಕಳ ಸೃಜನಶೀಲತೆ ಪೋಷಣೆ ಅಗತ್ಯ

02:33 PM May 27, 2022 | Team Udayavani |

ಮುಂಡರಗಿ: ರಾಜ್ಯ ಸರಕಾರ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಎಸ್‌.ಎಂ. ಭೂಮರಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡ ಉಚಿತ ಬೇಸಿಗೆ ಶಿಬಿರವನ್ನು ಸಿಡಿಪಿಒ ಮಹದೇವ ಇಸರನಾಳ ಮಕ್ಕಳೊಂದಿಗೆ ಚಿತ್ತಾರ ಬಿಡಿಸುವ ಮೂಲಕ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಸಿಡಿಪಿಒ ಮಹದೇವ ಇಸರನಾಳ ಅವರು, ಬಾಲಭವನವು ಪ್ರತಿವರ್ಷ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರಗಳನ್ನು ಸಂಘಟಿಸುತ್ತಿದ್ದು, ಮಕ್ಕಳು ಇದರ ಲಾಭ ಪಡೆಯಲಿದ್ದಾರೆ. ಇಲಾಖೆ ಸಹಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಉಸ್ತುವಾರಿಯಲ್ಲಿ ಈ ಶಿಬಿರ ನಡೆಯಲಿದ್ದು ಮಕ್ಕಳಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲು ನೃತ್ಯ, ಸಂಗೀತ, ಸಾಹಿತ್ಯ, ಚಿತ್ರಕಲೆ, ಕಾಗದ ಕುಸರಿಕಲೆ, ಯೋಗ, ನಾಟಕ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಆಯಾ ಕ್ಷೇತ್ರದಲ್ಲಿ ನುರಿತ ಸಂಪನ್ಮೂಲವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡಲಿದ್ದಾರೆ. ಒಂದು ದಿನ ಹೊರಸಂಚಾರ ಕೂಡ ಶಿಬಿರದಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ| ನಿಂಗು ಸೊಲಗಿ ಮಾತನಾಡಿ, ಮಕ್ಕಳ ಸೃಜನಶೀಲತೆ ಪೋಷಿಸಲು ಇಂಥ ಶಿಬಿರಗಳ ಅಗತ್ಯತೆ ಇದ್ದು, ಬೇಸಿಗೆ ಅವಧಿಯಲ್ಲಿ ಹಲವೆಡೆ ಶಿಬಿರಗಳು ನಡೆಯುತ್ತವೆಯಾದರೂ ಉಚಿತವಾಗಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಾಲಭವನ ಸೊಸೈಟಿ ಉಚಿತ ಶಿಬಿರಗಳನ್ನು ಹಮ್ಮಿಕೊಂಡಿದ್ದು, ಬಡ ಮಕ್ಕಳಿಗೂ ಇದರ ಲಾಭ ತಟ್ಟುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಇದರ ಔಚಿತ್ಯವನ್ನರಿತೇ ಸಾರ್ವಜನಿಕ ಶಿಕ್ಷಣ ಇಲಾಖೆ ಬೇಸಿಗೆ ರಜಾ ಅವಧಿಯ ನಂತರ ಹದಿನೈದು ದಿನ ಬೇಗನೇ ಶಾಲೆ ಆರಂಭಿಸಿ ಮಳೆಗಾಲದ ಮುನ್ನ ಮಕ್ಕಳಿಗೆ ಮಳೆಬಿಲ್ಲು ಹೆಸರಿನಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಹೆಜ್ಜೆ ಇರಿಸಿದೆ ಎಂದರು.

ಬಿಆರ್‌ಸಿ ಸಂಪನ್ಮೂಲವ್ಯಕ್ತಿ ಬಿ.ಎಚ್‌. ಸೂಡಿ, ಸಿಆರ್‌ಪಿ ಎಸ್‌.ಡಿ. ಬಸೆಗೌಡರ ಮಾತನಾಡಿದರು. ಶಿಬಿರ ಸಂಚಾಲಕ ಸತ್ಯಪ್ಪ ಸತ್ಯಮ್ಮನಗುಡಿ, ಆರ್‌. ಎಸ್‌. ಚವಡಿ, ಎಂ.ಪಿ. ಶೀರನಹಳ್ಳಿ, ಎಸ್‌.ಎನ್‌. ಪಾಟೀಲ, ಕೆ.ಎಂ. ರತ್ನಕಟ್ಟಿ, ಡಿ.ಎಚ್‌. ಭಜಂತ್ರಿ ಉಪಸ್ಥಿತರಿದ್ದರು.

Advertisement

ಸುಜಾತಾ ಬೆಟಗೇರಿ ಸ್ವಾಗತಿಸಿದರು. ಎಸ್‌.ಎಚ್‌. ಪೂಜಾರ ನಿರೂಪಿಸಿದರು. ಬಿ.ಕೆ. ಮಾದರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next