ಭಟ್ಕಳ: ಬೇಗ ಬೇಗ ಬನ್ನಿ, 10 ರೂ.ಗೆ ಒಂದು ಮಾವಿನ ಹಣ್ಣು, ತಂಡಾ ತಂಡಾ ಜ್ಯೂಸ್ ಕುಡಿಯಿರಿ, ತರಕಾರಿ ಬೇಕಾ ತರಕಾರಿ, ಬಿಸಿ ಬಿಸಿ ಲಡ್ಡು ತೆಗೆದುಕೊಳ್ಳಿ… ಹೀಗೆಂದು ಕುಗುತ್ತಿರುವವರು ಯಾವುದೋ ಹೋಟೆಲ್ ಮಾಣಿ ಅಥವಾ ತರಕಾರಿ ಮಾರುವವಳಲ್ಲ. ಮೇಲಾಗಿ ಇಲ್ಲಿನ ಕನ್ನಡ ಗಂಡು ಮಕ್ಕಳ ಶಾಲೆ ಪಕ್ಕದಲ್ಲಿಯ ನೆಹರು ರಸ್ತೆಯಲ್ಲಿ ಪುಟ್ಟ ಪುಟ್ಟ ಮಕ್ಕಳ ಧ್ವನಿ.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಸಂತೆಯನ್ನು ನಡೆಸುವುದು ಹೇಗೆ, ಮಾರಾಟ ಮಾಡುವ ಕೌಶಲ ಹೇಗೆ ಬೆಳೆಸಿಕೊಳ್ಳಬೇಕು ಎನ್ನುವ ಕುರಿತು ಅರಿವು ಮೂಡಲಿ ಎಂದು ಸಂತೆ ಆಯೋಜಿಸಲಾಗಿತ್ತು. ಸಂತೆಯಲ್ಲಿ ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಂಡು ಪ್ರೀತಿಯಿಂದ ಮಕ್ಕಳಲ್ಲಿ ವಿವಿಧ ವಸ್ತುಗಳನ್ನು ಖರೀಸಿದರು. ಮಕ್ಕಳೂ ಅತ್ಯಂತ ಉತ್ಸಾಹದಿಂದ ಜನರನ್ನು ಕರೆದು ತಮ್ಮಲ್ಲಿರುವ ವಸ್ತುಗಳನ್ನ ಮಾರಾಟ ಮಾಡುತ್ತಿರುವುದು ಕಂಡುಬಂತು.
ಈ ಸಂದರ್ಭದಲ್ಲಿ ಸಂಗಾತಿ ರಂಗಭೂಮಿ ಅಂಕೋಲಾದ ರಮೇಶ ನಾಯ್ಕ ಮಾತನಾಡಿ, ಮಕ್ಕಳಿಗೆ ಧೈರ್ಯ ಬರಬೇಕು, ಮಾರ್ಕೆಟಿಂಗ್ ಮಾಡುವುದರಲ್ಲಿ ಮಕ್ಕಳು ಎಷ್ಟು ನಿಪೂಣರು ಎನ್ನುವುದನ್ನು ಅಳೆಯಲು ಇಂತಹ ಸಂತೆ ಏರ್ಪಡಿಸಿ ಪ್ರತಿಭೆಯನ್ನು ಗುರುತಿಸುತ್ತೇವೆ. ಇಲ್ಲಿನ ಮಕ್ಕಳು ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದರು.
Advertisement
ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ, ಶಿಶು ಅಭಿವೃದ್ಧಿ ಯೋಜನೆ ಭಟ್ಕಳ ಹಾಗೂ ಸಂಗಾತಿ ರಂಗಭೂಮಿ ಅಂಕೋಲಾ ಇವರು ನಡೆಸುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಅಂಗವಾಗಿ ನೆಹರು ರಸ್ತೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆಯಲ್ಲಿ ಕೇಳಿ ಬಂದ ಧ್ವನಿಗಳಿವು.