ಹುಮನಾಬಾದ: ಕ್ಯಾಂಪಸ್ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್ ಮಹಿಂದ್ರಾ ಆಟೋಮೊಬೈಲ್ ಕಂಪನಿ ವ್ಯವಸ್ಥಾಪಕ ನಿತೀನ್ ಕೋಟೆ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ನಡೆದ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅತ್ಯಧಿಕ ಟ್ರ್ಯಾಕ್ಟರ್ ಉತ್ಪಾದಿಸುವ ಏಕೈಕ ಕಂಪನಿ ಮಹಿಂದ್ರಾ ಆ್ಯಂಡ್ ಮಹಿಂದ್ರಾ. ಇಂಥ ಕಂಪನಿಯಲ್ಲಿ ಸೇವೆ ಸಲ್ಲಿಸುವುದು ಮತ್ತು ಕ್ಯಾಂಪಸ್ ಸಂದರ್ಶನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುವುದೇ ಕಷ್ಟಸಾಧ್ಯ. ಆದರೆ ಈ ಕಂಪನಿ ವಿದ್ಯಾವಂತ ನಿರುದ್ಯೋಗಿಗಳ ವಿದ್ಯಾಲಯದ ಬಾಗಿಲಿಗೆ ಬಂದು ಸೇವೆ ಒದಗಿಸುತ್ತಿರುವುದು ಸುದೈವ ಎಂದು ಅದೆಷ್ಟೋ ಕಡೆ ನಡೆಸಲಾದ ಕ್ಯಾಂಪಸ್ ಸಂದರ್ಶನದಲ್ಲಿ ಸಂದರ್ಶನಾರ್ಥಿಗಳು ಹೇಳಿರುವ ನಿದರ್ಶನಗಳಿವೆ ಎಂದರು. ಬಳಿಕ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಡಿ.ಪವಾರ ಕಳೆದ ಹಲವು ವರ್ಷಗಳಿಂದ ಮಹಿಂದ್ರಾ ಆ್ಯಂಡ್ ಮಹಿಂದ್ರಾ ಕಂಪನಿ ನಮ್ಮ ಮಹಾವಿದ್ಯಾಲದಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜಿಸಿ, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತಿರುವುದು ಪ್ರಶಂಸನೀಯ ಎಂದರು. ಕಂಪನಿಯ ಮಾನವಸಂಪನ್ಮೂಲ ಅಧಿಕಾರಿ ಸಂತೋಷ ಮಾತನಾಡಿ, ಕಂಪನಿಯಲ್ಲಿ ಸಿದ್ಧವಾಗುವ ಸಾಮಗ್ರಿ ತಯ್ನಾರಿಕಾ ವಿಧಾನ ಕುರಿತು ಮಾರ್ಗದರ್ಶನ ನೀಡಿದರು. ಕಂಪನಿಯ ಎಂಜಿನಿಯರ್‌ಗಳಾದ ಅಜೀತ್ ಕೋಟೆ, ನರಸಿಂಹರೆಡ್ಡಿ ವೇದಿಕೆಯಲ್ಲಿದ್ದರು. ಬೀದರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ 200ಕ್ಕೂ ಅಧಿಕ ವಿದ್ಯಾವಂತರು ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕಿ ಮಲ್ಲಮ್ಮ ಪ್ರಾರ್ಥಿಸಿದರು. ಉಪನ್ಯಾಸಕ ಸಿದ್ದು ಸ್ವಾಗತಿಸಿದರು. ತರಬೇತಿ ಅಧಿಕಾರಿ ವಿಶ್ವನಾಥ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಧನಶಟ್ಟಿ ವಂದಿಸಿದರು.