ಸಿಂದಗಿ: ಶಾಲೆಯಿಂದ ದೂರುಳಿದು ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಅವರನ್ನು ಮರಳಿ ಶಾಲೆಗೆ ಕಳುಹಿಸಿದ ಘಟನೆ ತಾಲೂಕಿನ ದೇವರಹಿಪ್ಪರಗಿ ಪಟ್ಟಣದ ಹೊರವಲಯದಲ್ಲಿ ಗುರುವಾರ ನಡೆದಿದೆ.
ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಸ್ವತಃ ತಮ್ಮ ಸಿಬ್ಬಂದಿಯೊಂದಿಗೆ ದೇವರಹಿಪ್ಪರಗಿಯಲ್ಲಿನ ಇಟ್ಟಂಗಿ ಬಟ್ಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಟ್ಟಂಗಿ ಬಟ್ಟಿ ಕೆಲಸ ಮಾಡುತ್ತಿರುವ ಇಬ್ಬರು ಶಾಲಾ ಮಕ್ಕಳನ್ನು ಗುರುತಿಸಿದ್ದಾರೆ. ತಾಲೂಕಿನ ಹೊನ್ನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಸರು ದಾಖಲಾಗಿರುವ 2ನೇ ತರಗತಿಯ ವಿದ್ಯಾರ್ಥಿ ರವಿ ಲಕ್ಕಪ್ಪ ದೇವೂರ, 3ನೇ ತರಗತಿಯ ವಿದ್ಯಾರ್ಥಿ ಸಾದೇವಪ್ಪ ಲಕ್ಕಪ್ಪ ದೇವೂರ ಅವರಿಗೆ ತಿಳಿಹೇಳಿ ಮರಳಿ ಶಾಲೆಗೆ ಕಳುಹಿಸಿದ್ದಾರೆ.
ಮಕ್ಕಳೊಂದಿಗೆ ಆಪ್ತಸಮಾಲೋಚನೆ ನಡೆಸಿದ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಮಾತನಾಡಿ, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಕೆಲಸಕ್ಕೆ ಸೇರಿಸುವುದು ಅಪರಾಧ. ಕೂಲಿ ಹಣ ಉಳಿತಾಯವಾಗುತ್ತದೆ ಎಂದು ಶಾಲಾ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಅಪ ರಾಧ. ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಕೆಲಸಕ್ಕೆ ಸೇರಿಸಬೇಡಿ ಎಂದರು.
ಸರಕಾರ 14 ವರ್ಷದವರೆಗೆ ಕಡ್ಡಾಯ ಶಿಕ್ಷಣ ಮಾಡಿದೆ. ಕಷ್ಟದ ಜೀವನದಲ್ಲಿ ಶಿಕ್ಷಣ ಕಲಿಸಲು ತೊಂದರೆ ಅಥವಾ ಅನಾನುಕೂಲವಾಗುತ್ತಿದ್ದಲ್ಲಿ ತಮನ್ನು ಭೇಟಿ ಮಾಡಿ. ಆದರೆ ಮಕ್ಕಳನ್ನು ಕೂಲಿಗೆ ಕಳುಹಿಸಬೇಡಿ. ಸರಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು. ದೇವರಹಿಪ್ಪರಗಿಯ ಬಿಆರ್‌ಸಿ ಎಸ್.ಎಂ. ಪಾಟೀಲ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ನಿರಂತರ ಗೈರು ಹಾಜರಿ ಉಳಿಯುವಂತ ಮಕ್ಕಳನ್ನು ಗುರುತಿಸಿ ಅವರ ಬಗ್ಗೆ ತಿಳಿದುಕೊಂಡು ಮರಳಿ ಶಾಲೆಗೆ ಕರೆದುಕೊಂಡು ಬರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಶಾಲಾ ಮುಖ್ಯಸ್ಥರಿಗೆ ಹಾಗೂ ಶಿಕ್ಷಕರಿಗೆ ಸೂಚಿಸಿದ್ದಾರೆ.
ಮನೆಯಲ್ಲಿ ಬಹಳ ಕಷ್ಟವಿದೆ. ನನಗೆ ಶಾಲೆ ಕಲಿಯಲು ಇಷ್ಟ. ಆದರೆ ಬಡತನಕ್ಕಾಗಿ ಕೂಲಿ ಕೆಲಸಕ್ಕೆ ಬಂದಿದ್ದೇನೆ. ಸಾಹೇಬರು ನೀನು ಮೊದಲು ಶಾಲೆ ಕಲಿ. ನಿನಗೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ. ನಾವು ಇಂದಿನಿಂದ ಶಾಲೆಗೆ ಹೋಗುತ್ತೇವೆ.
ಸಾದೇವಪ್ಪ ಲಕ್ಕಪ್ಪ, ದೇವೂರ ವಿದ್ಯಾರ್ಥಿ