Advertisement

4 ತಿಂಗಳಿನಿಂದ ಹೊರಗುಳಿದಿದ್ದ ಮಕ್ಕಳು ಮರಳಿ ಶಾಲೆಗೆ

11:59 PM Nov 06, 2019 | Team Udayavani |

ಈಶ್ವರಮಂಗಲ: ನಾಲ್ಕು ತಿಂಗಳಿನಿಂದ ಶಾಲೆಯಿಂದ ಹೊರಗುಳಿದಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳನ್ನು ಮರಳಿ ಶಾಲೆಗೆ ಸೇರ್ಪಡೆಗೊಳಿಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಶಾಲೆಯಲ್ಲಿ ನಡೆದಿದೆ.

Advertisement

ಬಡಗನ್ನೂರು ಗ್ರಾ.ಪಂ. ಸಮೀಪದ ನಿವಾಸಿ ಗಳಾದ ಸುಂದರ – ಪ್ರೇಮಾ ದಂಪತಿಗೆ ಆರು ಜನ ಮಕ್ಕಳು. ಸುಂದರ ಅವರ ತಾಯಿಯೂ ಜತೆಗಿದ್ದಾರೆ. ದಂಪತಿ ಈಶ್ವರಮಂಗಲದ ಸಾರ್ವಜನಿಕ ಶೌಚಾಲಯದ ಶುಚಿತ್ವದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಹಿರಿಯ ಪುತ್ರ ದುಡಿಯುತ್ತಿದ್ದರೆ ಕೊನೆಯ ಪುತ್ರ ಅಂಗನವಾಡಿಗೆ ಹೋಗದೆ ಅಜ್ಜಿಯ ಜತೆಗೆ ಸಮಯ ಕಳೆಯುತ್ತಿದ್ದ. ಇನ್ನೊಬ್ಬಳು ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದು, ಆಕೆಯೂ ಆಗಾಗ ಶಾಲೆಗೆ ಗೈರು ಹಾಜರಾಗುತ್ತಾಳೆ. ಬಡಗನ್ನೂರು ಸರಕಾರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಾಗಿರುವ ಜಯಶ್ರೀ (7ನೇ), ಯತೀಶ್‌ (5ನೇ) ಮತ್ತು ಸಂತೋಷ (1ನೇ) ಆಗಸ್ಟ್‌ನಿಂದ ಶಾಲೆಯತ್ತ ಮುಖ ಮಾಡಿರಲಿಲ್ಲ. ಶಿಕ್ಷಣದ ಬಗ್ಗೆ ಹೆತ್ತವರಲ್ಲಿರುವ ನಿರ್ಲಕ್ಷ ದ ಪರಿಣಾಮವಾಗಿ ಮಕ್ಕಳಲ್ಲಿ ಶಾಲೆಗೆ ಹೋಗದಿದ್ದರೂ ನಡೆಯುತ್ತದೆ ಎಂಬ ಮನೋಭಾವ ಮಕ್ಕಳಲ್ಲಿ ಬೆಳೆದಿತ್ತು.

ಫ‌ಲ ನೀಡಿದ ಪ್ರಯತ್ನ
ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪೊಲೀಸ್‌ ಇಲಾಖೆ, ಸಾರ್ವ ಜನಿಕರು ಸತತವಾಗಿ ಪ್ರಯತ್ನ ಮಾಡಿದರೂ ಮಕ್ಕಳನ್ನು ಶಾಲೆಗೆ ಕರೆತರುವ ಯತ್ನ ಫ‌ಲ ನೀಡಿರಲಿಲ್ಲ. ಕೊನೆಗೆ 2 ದಿನಗಳ ಹಿಂದೆ ಮಂಗಳೂರು ಚೈಲ್ಡ್‌ಲೈನ್‌ ಅಧಿಕಾರಿಗಳಾದ ಆಶಾಲತಾ, ಅಸುಂತ, ಕುಂಬ್ರ ಕ್ಲಸ್ಟರ್‌ ಮುಖ್ಯಸ್ಥೆ ಶಶಿಕಲಾ ಮತ್ತು ಪಂ. ಅಧಿಕಾರಿಗಳ ತಂಡವು ಪೋಷಕರು ಮತ್ತು ಹೆತ್ತವರಿಗೆ ಶಿಕ್ಷಣದ ಮಹತ್ವ ವನ್ನು ಮನವರಿಕೆ ಮಾಡಿದರು. ಮಕ್ಕಳನ್ನು ಕಳಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದರು. ಅದರ ಫ‌ಲವಾಗಿ ನ. 6ರಂದು ಮೂವರು ಮಕ್ಕಳೂ ಶಾಲೆಗೆ ಹಾಜರಾದರು. ಶಾಲೆಗೆ ಹೋಗದ ಮಕ್ಕಳಿಬ್ಬರನ್ನು ಪೊಲೀಸ್‌ ಸಿಬಂದಿ ಮನವೊಲಿಸಿ ಶಾಲೆಗೆ ಕಳುಹಿಸಿದ ಘಟನೆ ಮಂಗಳವಾರ ವಿಟ್ಲದಿಂದ ವರದಿಯಾಗಿತ್ತು.

ಕೆಲವು ತಿಂಗಳಿನಿಂದ ಶಾಲೆಗೆ ಬಾರದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಹಲವು ಬಾರಿ ಪ್ರಯತ್ನಿಸಿದರೂ ಹೆತ್ತವರು ಸ್ಪಂದಿಸದ ಕಾರಣ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಂಗಳೂರಿನ ಚೈಲ್ಡ್‌ ಲೈನ್‌ನವರ ನೆರವಿನೊಂದಿಗೆ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಸಫಲರಾಗಿದ್ದೇವೆ.
– ಶಶಿಕಲಾ, ಸಿಆರ್‌ಪಿ, ಕುಂಬ್ರ ಕ್ಲಸ್ಟರ್‌ ವಲಯ

Advertisement

ಮಕ್ಕಳು ವಾಸವಾಗಿರುವ ಮನೆ ಸಂಪೂರ್ಣ ಜೀರ್ಣವಾಗಿದ್ದು, ದುರಸ್ತಿಗಾಗಿ ಪಂಚಾಯತ್‌ಗೆ ಅರ್ಜಿ ಕೊಡುವಂತೆ ತಿಳಿಸಿದ್ದೇವೆ. ಡೋರ್‌ ನಂಬರ್‌, ಕುಡಿಯುವ ನೀರಿನ ಸಂಪರ್ಕ ಇದೆ. ಎಲ್ಲ ರೀತಿಯ ಸಹಾಯ ನೀಡಲು ಪಂಚಾಯತ್‌ ಬದ್ಧವಿದೆ.
– ವಸೀಮ್‌ಗಂಧ, ಬಡಗನ್ನೂರು ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next