Advertisement

ಆಸ್ತಿಗಾಗಿ ತಂದೆಯಿಂದ ತಾಯಿಗೆ ತಲಾಖ್‌ ಕೊಡಿಸಿದ ಮಕ್ಕಳು!

06:00 AM Dec 06, 2017 | Harsha Rao |

ಮಂಡ್ಯ: ಆಸ್ತಿಗಾಗಿ ಮಕ್ಕಳೇ ತಂದೆಯಿಂದ ತಾಯಿಗೆ ಬಲವಂತವಾಗಿ ತಲಾಖ್‌ ಹೇಳಿಸಿ ಅವರ ಹೆಸರಿನಲ್ಲಿರುವ 
ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿದ್ದಲ್ಲದೇ ಅವರನ್ನು ಮನೆಯಿಂದ ಹೊರ ಹಾಕಿರುವ ಅಮಾನವೀಯ ಘಟನೆ ನಡೆದಿದೆ. ಆದರೆ ಹಿರಿಯ ಪುತ್ರ ಮಾತ್ರ ತಂದೆ-ತಾಯಿ ಜತೆಗೆ ನಿಂತಿದ್ದು ತನ್ನ ಸಹೋದರರಿಂದ ಹೆತ್ತವರಿಗೆ ರಕ್ಷಣೆ ನೀಡುವ ಸಲುವಾಗಿ ಹೋರಾಟ ನಡೆಸುತ್ತಿದ್ದಾರೆ.

Advertisement

ಮಕ್ಕಳ ವರ್ತನೆಯಿಂದ ಮಾನಸಿಕವಾಗಿ ನೊಂದಿರುವ ವೃದ್ಧ ಜೀವಗಳು ಈಗ ಮಂಡ್ಯ ಹಿರಿಯ ನಾಗರಿಕರ ಸಹಾಯವಾಣಿ ಮೊರೆ ಹೋಗಿದ್ದಾರೆ. ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಮಕ್ಕಳು ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ. ದೌರ್ಜನ್ಯದಿಂದ ಕಸಿದುಕೊಂಡಿರುವ ಮನೆಯನ್ನು ವಾಪಸ್‌ ಕೊಡಿಸುವುದು ಹಾಗೂ ನಮಗೆ ರಕ್ಷಣೆ ದೊರಕಿಸುವಂತೆ ಜಿಲ್ಲಾ ಪೊಲೀಸ್‌ ಅಧೀಕ್ಷಕಿ ಜಿ. ರಾಧಿಕಾ ಅವರಿಗೆ ಮನವಿ ಮಾಡಿದ್ದಾರೆ.

ನಾಗಮಂಗಲ ತಾಲೂಕು ಬೆಳ್ಳೂರು ಸಮೀಪದ ಉಮರ್‌ ನಗರ ನಿವಾಸಿಗಳಾದ ಅಬ್ದುಲ್‌ ಮಜೀದ್‌ ಹಾಗೂ ಅವರ ಪತ್ನಿ ಫಾತಿಮಾಬೀ ಅವರೇ ಬೀದಿ ಪಾಲಾಗಿರುವ ವಯೋವೃದ್ಧರು. ಇವರ ಮಕ್ಕಳಾದ ರಿಯಾಜ್‌ ಪಾಷಾ, ಗಯಾಜ್‌ ಪಾಷಾ, ಅಮ್ಜದ್‌ ಪಾಷಾ ಹಾಗೂ ಮಹಮದ್‌ ಗೌಸ್‌ ಆಸ್ತಿ ಬರೆದು ಕೊಡುವಂತೆ ಹೆತ್ತವರನ್ನು ಒತ್ತಾಯಿಸಿ ಮನೆಯಿಂದ ಹೊರಹಾಕಿದವರು.

ಘಟನೆಯ ವಿವರ: ಅಬ್ದುಲ್‌ ಮಜೀದ್‌ ಹಾಗೂ ಫಾತಿಮಾಬೀ ಅವರಿಗೆ ಐವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಪುತ್ರಿ ಅಸ್ಮನ್‌ ತಾಜ್‌ಳಿಗೆ ಮದುವೆಯಾಗಿದೆ. ಐದು ಜನ ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದರು.

ಹಿರಿಯ ಮಗ ನಯಾಜ್‌ ಪಾಷಾ ಹೃದ್ರೋಗಿಯಾಗಿದ್ದರೂ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಸಹಿಸದಂತಾಗಿತ್ತು. ಕಿರಿಯ ಮಕ್ಕಳಾದ ಮಹಮ್ಮದ್‌ ಗೌಸ್‌, ರಿಯಾಜ್‌ ಪಾಷಾ, ಗಯಾಜ್‌ ಪಾಷಾ ಹಾಗೂ ಅಮ್ಜದ್‌ ಪಾಷಾ ಅವರಿಗೆ ಹೆತ್ತವರ ಹೆಸರಿನಲ್ಲಿರುವ ಆಸ್ತಿ ಮೇಲೆ ಕಣ್ಣು ಬಿತ್ತು.

Advertisement

ಈ ಆಸ್ತಿಯನ್ನು ಹಿರಿಯ ಮಗನಿಗೆ ಕೊಟ್ಟು ಬಿಡುವರೋ ಎಂಬ ಭೀತಿಗೊಳ ಗಾದ ನಾಲ್ವರು ಕಿರಿಯ ಮಕ್ಕಳು ಹಿರಿಯ ವನಾದ ನಯಾಜ್‌ ಪಾಷಾ, ಆತನ ಪತ್ನಿ ನಿಷಾದ್‌ ಪರ್ವೀನ್‌ ಹಾಗೂ ಮಕ್ಕಳನ್ನು ಮೊದಲು ಮನೆಯಿಂದ ಹೊಡೆದು ಹೊರ ಹಾಕಿದರು. ಮನೆಯಿಂದ ಏಕೆ ಹೊರ ಹಾಕಿದಿರಿ ಎಂದು ದಂಪತಿ ಪ್ರಶ್ನಿಸಿದಾಗ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೊಣ್ಣೆಯಿಂದ ನಾಲ್ವರು ಮಕ್ಕಳು ಇವರ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ, ಆಸ್ತಿಯನ್ನು ಬರೆದುಕೊಡುವಂತೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ.

ತಲಾಖ್‌ ಹೇಳಿಸಿದ ಮಕ್ಕಳು: ಹಿರಿಯ ಮಗನನ್ನೇ ಆಶ್ರಯಿಸಿಕೊಂಡು ಹೋಗುವ ನೀವು ನಮಗಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರಲ್ಲದೆ, ತಂದೆಯಿಂದಲೇ ತಾಯಿಗೆ ಬಲವಂತವಾಗಿ ತಲಾಖ್‌ ಹೇಳಿಸಿದರು.

ಯಾವುದೋ ಅರ್ಜಿಗೆ ಅಬ್ದುಲ್‌ ಮಜೀದ್‌ ಅವರಿಂದ ಹೆಬ್ಬೆಟ್ಟಿನ ಗುರು ತನ್ನು ತೆಗೆದಿಟ್ಟುಕೊಂಡಿದ್ದನ್ನೇ ಆಧಾರವಾಗಿಸಿಕೊಂಡು ಎರಡು ತಿಂಗಳ ಹಿಂದೆಯೇ ನಿಮ್ಮಿಬ್ಬರಿಗೂ ತಲಾಖ್‌ ಆಗಿಹೋಗಿದೆ ಎಂದು ಹೇಳಿ ತಾಯಿ ಫಾತಿಮಾಬೀ ಅವರನ್ನು ಮನೆಯಿಂದ ಹೊರಹಾಕಿದರು. ಆ ಸಮಯದಲ್ಲಿ ಅವರು ಹಿರಿಯ ಮಗ ನಯಾಜ್‌ 
ಪಾಷಾನ ಆಶ್ರಯಕ್ಕೆ ಹೋದರು.

ಬಳಿಕ ಕಿರಿಯ ಮಗನಾದ ಮಹಮದ್‌ ಗೌಸ್‌ ವೃತ್ತಿಯಲ್ಲಿ ವಕೀಲನಾ ಗಿದ್ದು, 17 ಸೆಪ್ಟಂಬರ್‌ 2017ರಲ್ಲಿ ನನಗೂ ನಿನಗೂ ಯಾವುದೇ ಸಂಬಂಧವಿಲ್ಲವೆಂದು ಯಾವುದೋ ಅರ್ಜಿ ಮಾಡಿಕೊಂಡು ಹಕ್ಕು ಖುಲಾಸೆ ಪತ್ರವನ್ನು ತಂದೆಯ ಮುಖಕ್ಕೆ ಎಸೆದು ಅವರನ್ನೂ ಮನೆಯಿಂದ ಹೊರಹಾಕಿದ್ದಾನೆ. ಈ ವಿಷಯ ತಿಳಿದ ಹಿರಿಯ ಮಗ ನಯಾಜ್‌ ಪಾಷಾ ತಂದೆಯನ್ನೂ ತನ್ನ ಮನೆಗೆ ಕರೆತಂದಿದ್ದಾರೆ.

ನಾಲ್ವರು ಮಕ್ಕಳ ವಿರುದ್ಧ ದೂರು: ಹಿರಿಯ ಮಗನ ಕುಟುಂಬ ಹಾಗೂ ನಮ್ಮನ್ನೂ ಮನೆಯಿಂದ ಹೊರಹಾಕಿ ದುಷ್ಟತನ ತೋರಿರುವ ನಾಲ್ವರು ಮಕ್ಕಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮತ್ತೆ ನಮ್ಮ ಮನೆಯಲ್ಲೇ ವಾಸ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ. ಹೆತ್ತವರ ಪರವಾಗಿ ನಯಾಜ್‌ ಪಾಷಾ ತನ್ನ ನಾಲ್ವರು ಸೋದರರ ವಿರುದ್ಧ ದೂರು ನೀಡಿದ್ದಾರೆ.

*ಮಂಡ್ಯ ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next