ಬೆಂಗಳೂರು: ನವಮಾಸ ಹೊತ್ತು, ಹೆತ್ತ ತಾಯಿಯನ್ನು ವೃದ್ಧಾಶ್ರಮಗಳಲ್ಲಿ ಬಿಟ್ಟು ಅನಾಥರನ್ನಾಗಿಸುವ ಕೆಲವರ ಮಧ್ಯೆಯೂ ತಾಯಿಗೊಂದು ದೇಗುಲ ಕಟ್ಟಿಸಿ, ಪ್ರತಿನಿತ್ಯ ಪೂಜಿಸುವ ಮೂಲಕಮಾತೃ ದೇವೋಭವ ಎನ್ನುವ ಮಾತನ್ನು ನಾಲ್ವರು ಸಹೋದರರು ಸಾಕ್ಷೀಕರಿಸುತ್ತಿದ್ದಾರೆ.
ಹೌದು, ಸದ್ಯ ವಿಧಾನ ಪರಿಷತ್ ಕಾರ್ಯದರ್ಶಿಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬಾಳೂರು ತಾಂಡಾದ ಅಣ್ಣಪ್ಪ ಲಮಾಣಿ ಎಂಬುವವರು ತಮ್ಮ ಮೂವರು ಸಹೋದರರ ಜತೆ ಸೇರಿ ಹೆತ್ತ ತಾಯಿಗೆ ದೇಗುಲ ಕಟ್ಟಿಸಿ ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಪೂಜಿಸುತ್ತಾ ಬಂದಿದ್ದಾರೆ. ಇಂತಹ ಮಕ್ಕಳನ್ನು ಹೆತ್ತ ತಾಯಿ ಹೇಮವ್ವ ಲಮಾಣಿ.
ಮೂಲತಃ ಬಡ ಕುಟುಂಬದ ಹೇಮವ್ವ ಲಮಾಣಿ, ತವರು ಮನೆಯ ಪೂಜಾರಿಕೆಯ ಜತೆ ಕೂಲಿ ಮಾಡಿ ತನ್ನ ಮಕ್ಕಳನ್ನು ಸಾಕಿದ್ದರು.ನಾಟಿ ವೈದ್ಯೆಯಾಗಿದ್ದು, ತನಗೆ ಗೊತ್ತಿದ್ದ ಗಿಡಮೂಲಿಕೆಗಳನ್ನು ತಾಂಡದ ಜನರಿಗೆ ನೀಡಿ ರೋಗಗಳನ್ನು ಗುಣ ಪಡಿಸುತ್ತಿದ್ದರಂತೆ. ಗ್ರಾಮದ ಯಾರ ಮನೆಯಲ್ಲಿ ಪೂಜೆಯಾದರೂ ಅಲ್ಲಿಗೆ ಹೋಗಿ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ನುಡಿಗಟ್ಟುಗಳನ್ನು ಹಾಡುವ ಮೂಲಕ ಗ್ರಾಮಸ್ಥರಿಗೆ ಅಚ್ಚುಮೆಚ್ಚಾಗಿದ್ದರು.
ಮಗ ಅಣ್ಣಪ್ಪ ಲಮಾಣಿ ಪ್ರಸ್ತುತ ವಿಧಾನಸೌಧದಲ್ಲಿ ಜಮೇದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಮಕ್ಕಳು ವ್ಯವಸಾಯ ಮಾಡುತ್ತಿದ್ದಾರೆ. ತಾಯಿ ಜೀವಂತವಾಗಿದ್ದಾಗಲೂ ದೇವರಂತೆ ಕಾಣುತಿದ್ದ ಇವರು, ಆಕೆಯ ಅಕಾಲಿಕ ಮರಣ ನಂತರ ತಮ್ಮ ಜಾಗದಲ್ಲಿ 10ಮೀ. ಉದ್ದ ಹಾಗೂ 7 ಮೀ. ಅಗಲದಲ್ಲಿ 4 ಲಕ್ಷರೂ. ಖರ್ಚು ಮಾಡಿ ಮಂದಿರ ನಿರ್ಮಿಸಿದ್ದಾರೆ. ಬನವಾಸಿಯ ಒಬ್ಬ ಶಿಲ್ಪಿ ಕೈಯಲ್ಲಿ ಎರಡು ಅಡಿ ಎತ್ತರದ ತಾಯಿಯ ಮೂರ್ತಿ ಕೆತ್ತಿಸಿ ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಪ್ರಸ್ತುತ ಈ ಕುಟುಂಬವು 4-5 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನದ ಜೀಣೊದ್ಧಾರಕ್ಕೂ ಮುಂದಾಗಿದೆ. ಬಾಳೂರು ತಾಂಡಾದದಲ್ಲಿ 300ಕ್ಕೂ ಹೆಚ್ಚು ಲಮಾಣಿ ಕುಟುಂಬಗಳಿದ್ದು, ಅಲ್ಲಿನ ನಿವಾಸಿಗಳು ಕೂಡಾ ಹೇಮವ್ವನನ್ನು ದೇವರಂತೆ ಪೂಜಿಸುತ್ತಾರೆ. ಪ್ರತಿ ವರ್ಷ ದಸರಾ ಸಮಯದಲ್ಲಿ 5 ದಿನಗಳ ಕಾಲ ವಿಶೇಷ ಪೂಜೆ, ಅನ್ನಸಂತರ್ಪಣೆ,ಭಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ.
ತಾಯಂದಿರ ದಿನದ ವಿಶೇಷ: ಪ್ರತಿ ವರ್ಷವೂ ತಾಯಂದಿರ ದಿನದಂದು ವಿಶೇಷ ಪೂಜೆ ಮಾಡುತ್ತಾ ಬಂದಿದ್ದು, ಅಂದರಂತೆ ಈ ಬಾರಿಯೂ ಭಾನುವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಗೆ ಅನ್ನಸಂತರ್ಪಣೆಯನ್ನು ಈ
ಕುಟುಂಬ ಹಮ್ಮಿಕೊಂಡಿತ್ತು.
– ಜಯಪ್ರಕಾಶ್ ಬಿರಾದಾರ್