Advertisement
2ರಿಂದ 4 ವರ್ಷ ಸಣ್ಣ ವಯಸ್ಸಿನ ಮಕ್ಕಳಲ್ಲಿ ಪೊಲೀಸ್‌ರ ಭಯ ಹೋಗಿ, ಸುರಕ್ಷಾ ಭಾವನೆ ಮೂಡಿಸುವ ಉದ್ದೇಶದಿಂದ ನಗರದ ಎಂ.ಜೆ.ಎಂ. ಬಹ್ರುರುತುಲ್ ಕುರಾನ್ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ ಗುರುವಾರ ಬಜಪೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಮಧುರ ಧ್ವನಿಯಿಂದ ಹಾಡು ಹೇಳಿ ಪೊಲೀಸ್‌ರನ್ನು ರಂಜಿಸಿದ ಪುಟಾಣಿಗಳ ಮಕ್ಕಳಿಗೆ ಇಷ್ಟವಾದ ಐಸ್‌ಕ್ರೀಂನ್ನು ನೀಡಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತೋಷಪಟ್ಟರು. ಕಳೆದ ವಾರವಷ್ಟೇ ಕೈಕಂಬದ ಮರ್ಕಜ್ ಜಹರುತುಲ್ ಕುರಾನ್ ಶಾಲೆಯ 25 ಪುಟಾಣಿಗಳು ಬಜಪೆ ಪೊಲೀಸ್ ಠಾಣೆಗೆ ಬಂದಿದ್ದರು. ಅವರನ್ನು ಕೂಡ ಹೀಗೆ ಸ್ವಾಗತಿಸಿ, ಸಿಹಿತಿಂಡಿ ನೀಡಲಾಯಿತು. ವಾರಕ್ಕೊಂದು ಶಾಲೆಯ ಪುಟಾಣಿಗಳನ್ನು ಪೊಲೀಸ್ ಠಾಣೆಗೆ ಸ್ವಾಗತಿಸಿ, ಎಳೆಯ ವಯಸ್ಸಿನಲ್ಲೇ ಪೊಲೀಸ್‌ರ ಬಗ್ಗೆ ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಯಾವಾಗಲೂ ಪ್ರಕರಣ, ಕಳ್ಳತನ ಎಂದು ಕೆಲಸದ ಒತ್ತಡದಲ್ಲಿರುವ ನಮಗೆ ಪುಟಾಣಿಗಳು ಬಂದಾಗ ಮಾನಸಿಕ ತೃಪ್ತಿ ಸಿಗುತ್ತದೆ. ಸ್ಟೇಶನ್ ಮನೆ ಹಾಗೂ ಶಾಲೆಯಂತಾಗುತ್ತದೆ ಎಂದು ಬಜಪೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಸ್. ಪರಶಿವ ಮೂರ್ತಿ ಹೇಳಿದರು.
Related Articles
ಮನೆಗಳಲ್ಲಿ ಹೆತ್ತವರು ಪುಟಾಣಿಗಳು ತಪ್ಪು ಮಾಡಿದಾಗ ಬೆತ್ತವನ್ನು ತೋರಿಸಿ ಹೆದರಿಸುವ ಹಾಗೂ ಇಲ್ಲವೇ ಪೊಲೀಸ್ ರನ್ನು ಕರೆದು ಅಂಜಿಸುವ ವಾಡಿಕೆಯಿದೆ. ಈ ಭಯವನ್ನು ಅಕ್ಷರಶಃ ಹೋಗಲಾಡಿಸಿ ಸುರಕ್ಷೆ ಭಾವನೆ ಮೂಡಿಸುವ ದೃಷ್ಟಿಯಿಂದ ಪುಟಾಣಿಗಳನ್ನು ಠಾಣೆಗೆ ಭೇಟಿ ನೀಡಲಾಯಿತು ಎಂದು ಶಾಲೆಯ ಅಧ್ಯಾಪಕರು ಅಭಿಪ್ರಾಯಪಟ್ಟರು.
Advertisement