Advertisement

ಮಕ್ಕಳಿಗೆ ಲಲಿತ ಕಲೆಯ ಬಗ್ಗೆ ಅರಿವು ಮೂಡಿಸಬೇಕು: ನರೇಂದ್ರ

06:27 PM Dec 06, 2019 | Suhan S |

ಮುಂಬಯಿ, ಡಿ. 4: ಹೊರನಾಡ ಕನ್ನಡ ಸಂಘಟನೆಗಳಲ್ಲಿ ಹಿರಿಯರ ದಂಡೇ ಹೆಚ್ಚಾಗಿರುವಾಗ ಯುವಕಯುವತಿಯರೇ ತುಂಬಿದ ಪಲವಾ ಕನ್ನಡಿಗರ ಸಂಘ ಯುವ ಪಡೆಯ ಕನ್ನಡಾಭಿಮಾನವನ್ನು ಕಂಡಾಗ ಹೆಮ್ಮೆಯಾಗುತ್ತಿದೆ. ಈ ಯುವಕರ ಕಾರ್ಯ ಅಭಿನಂದನೀಯ ಮತ್ತು ಅನುಕರಣೀಯವಾಗಿದೆ ಎಂದು ರಂಗಭೂಮಿಯ ಹಿರಿಯ ನಟ, ನಿರ್ದೇಶಕ ಸುಭಾಷ್‌ ನರೇಂದ್ರ ಅವರು ನುಡಿದರು.

Advertisement

ಡಿ. 1ರಂದು ಸಂಜೆ ಡೊಂಬಿವಲಿಯ ಹೊರವಲಯದ ಪಲವಾ ಸಿಟಿಯ ಪಲವಾ ಕನ್ನಡಿಗರ ಸಂಘದ ವತಿಯಿಂದ ಸ್ಥಳೀಯ ಟೌನ್‌ಹಾಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮೂರು ಲಕ್ಷಕ್ಕೂ ಅಧಿಕ ಕನ್ನಡಿಗರು ವಾಸಿಸುತ್ತಿರುವ ಡೊಂಬಿವಲಿ ಪರಿಸರದಲ್ಲಿ 32ಕ್ಕೂ ಹೆಚ್ಚು ಕನ್ನಡಪರ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡಾಗ ನಾಡುನುಡಿಯ ಬಗ್ಗೆ ಕನ್ನಡಿಗರಿಗೆ ಇರುವ ಅಭಿಮಾನವನ್ನು ಸೂಚಿಸುತ್ತದೆ.ಭಾರತೀಯ ನಾಗರಿಕತೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದ್ದು, ಹರಪ್ಪಾ ಮೊಹೆಂಜೋದಾರೋ ಸಂಸ್ಕೃತಿಯ ಇತಿಹಾಸವನ್ನು ಗಮನಿಸಿದಾಗ ನಮ್ಮ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇರುವುದು ಕಂಡು ಬರುತ್ತದೆ. ನಮ್ಮನ್ನು ಅನೇಕ ಅರಸರು ಆಳಿ ಹೋಗಿದ್ದು, ಅವರೆಲ್ಲರೂ ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ವಿಜಯ ನಗರದ ಅರಸರು ವಿಶ್ವದ ಅತ್ಯಂತ ಶ್ರೀಮಂತರೆನಿಸಿದರೆ, ಶ್ರೀ ಕೃಷ್ಣದೇವರಾಯರ ಕಾಲಘಟ್ಟದಲ್ಲಿ ಕನ್ನಡಿಗರ ಪಾಲಿಗೆ ಸುವರ್ಣ ಯುಗ ವಾಗಿತ್ತು. ಅನೇಕ ಸಂಸ್ಕೃತಿಗಳ ಆಗರವಾದ ನಮ್ಮ ಕರ್ನಾಟಕದ ಕನ್ನಡ ಭಾಷೆ ಬರೆದಂತೆ ಮಾತನಾಡುವ, ಮಾತನಾಡಿದಂತೆ ಬರೆಯುವ ಏಕೈಕ ಭಾಷೆಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕ ಬೇಕೆಂದರೆ ನಮ್ಮ ಮಕ್ಕಳಿಗೆ ಲಲಿತ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ನುಡಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಸಾಹಿತಿ ಡಾ| ಸುಮಾ ದ್ವಾರಕಾನಾಥ್‌ ಅವರು, ಅನೇಕ ವರ್ಷ ಗಳಿಂದ ಕನ್ನಡಪರ ಚಟುವಟಿಕೆ ಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ ನನಗೆ ಹೆಚ್ಚಿನ ಕಾರ್ಯಕ್ರಮಗಳಲ್ಲಿ

ಹಿರಿಯರೇ ಕಂಡು ಬರುತ್ತಿರುವುದರಿಂದ ನಮ್ಮ ಪೀಳಿಗೆಯ ಜತೆಗೆ ಹೊರನಾಡಿನಲ್ಲಿ ಕನ್ನಡ ಮಾಯವಾಗುತ್ತದೊ ಎಂಬ ಆತಂಕವಿತ್ತು. ಆದರೆ ಪಲವಾ ಕನ್ನಡಿಗರ ಕನ್ನಡಾಭಿಮಾನ ಯುವಕರ ಕಾರ್ಯವೈಖರಿ ಕಂಡು ಕನ್ನಡ ಭಾಷೆಗೆ ಅಳಿವಿಲ್ಲ, ಕನ್ನಡ ಭಾಷೆ ನಿತ್ಯ ನಿರಂತರ ಎಂಬ ವಿಶ್ವಾಸ ಮೂಡುತ್ತಿದೆ. ಕೇವಲ ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆಯ ಕಾರ್ಯವೈಖರಿ ಅಭಿನಂದನೀಯ. ಸಂಸ್ಥೆಯು ನೂರಾರು ವರ್ಷಗಳ ಕಾಲ ಕನ್ನಡದ ಕಂಪನ್ನು ಬೀರುತ್ತಿರಲಿ ಎಂದು ನುಡಿದು ಶುಭಹಾರೈಸಿದರು.

Advertisement

ಇದೇ ಸಂದರ್ಭ ಗಣ್ಯರನ್ನು ಶಾಲುಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಂಘದ ಪದಾಧಿಕಾರಿಗಳು ಗೌರವಿಸಿದರು.

ಕವಿತಾ ದೇಶಪಾಂಡೆ ಮತ್ತು ಪ್ರತಿಭಾ ಜೋಶಿ ತಂಡದವರು ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಿದರು. ಸುಹಾಸ್‌ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಪರಿಚಯಿಸಿದರು. ಡಾ| ಸೌಮ್ಯಾ ರಾವ್‌, ಮೋಹನ್‌ ಸಿ. ಜಿ. ಕಾರ್ಯಕ್ರಮ ನಿರ್ವಹಿಸಿದರು. ವರುಣ್‌ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಅವಿನಾಶ್‌ ಸಿದ್ಧಯ್ಯ ವಂದಿಸಿದರು.

ಕನ್ನಡ ಭಾಷೆ, ಸಂಸ್ಕೃತಿಯನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದ ರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಏಕಪಾತ್ರಾಭಿನಯ, ಭರತನಾಟ್ಯ, ಯಕ್ಷಗಾನ ನೃತ್ಯ ರೂಪಕ, ಅಂತ್ಯಾಕ್ಷರಿ, ಮಕ್ಕಳಾದ ಖುಷಿ ನಾಯಕ್‌, ಸ್ವಪ್ನಾ ನಾಯಕ್‌ ಅವರಿಂದ ನೃತ್ಯ, ಭರತ್‌ ಶೆಟ್ಟಿ ಅವರಿಂದ ಏಕಪಾತ್ರಾಭಿನಯ ಗಮನ ಸೆಳೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪ್ರತಿಭೆಗಳನ್ನು ಗಣ್ಯರು ಗೌರವಿಸಿದರು. ನೂರಾರು ಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಂತಾರಾಮ್‌ ಶೆಟ್ಟಿ, ಚರಣ್‌ ಶೆಟ್ಟಿ, ವರುಣ್‌, ಸಂದೀಪ್‌, ಮೋಹನ್‌ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next