Advertisement

ರಿಕ್ಷಾದವರ ಮಕ್ಕಳೂ ಮಂತ್ರಿಗಳ ಮಕ್ಕಳೂ ಒಂದೇ ಶಾಲೆಯಲ್ಲಿ ಓದಲು ಆಗತ್ತಾ?

12:30 AM Jan 19, 2019 | |

ಉಡುಪಿ: ಬಡವರ ಮಕ್ಕಳೂ ಜಿಲ್ಲಾಧಿಕಾರಿ ಮಕ್ಕಳೂ, ರಿಕ್ಷಾ ಡ್ರೈವರ್‌ ಮಕ್ಕಳೂ ಮಂತ್ರಿಗಳ ಮಕ್ಕಳೂ ಒಂದೇ ಶಾಲೆಯಲ್ಲಿ ಓದುವ ಸ್ಥಿತಿ ಇದೆಯೆ? ಇಂತಹ ವ್ಯವಸ್ಥೆ ರೂಪಿಸಲು ಸಾಧ್ಯವೆ?

Advertisement

– ಇದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಶ್ನೆ. 

ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಶುಕ್ರವಾರ ನಡೆದ ಉಡುಪಿ ತಾ| ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ 1,000 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಾಗಿ ಹೇಳಿದೆ. ಇದನ್ನು ವಿರೋಧಿಸಬೇಕೆ? ಸಮರ್ಥಿಸಬೇಕೆ? ಈ ಎರಡೂ ನಿರ್ಣಯಗಳಿಂದ ಆಗುವ ಸಾಧಕಬಾಧಕಗಳೇನು ಎಂಬ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ಪರವಾಗಿ ಮಾತನಾಡಿದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿಸಲು ಹೊರಟಿದ್ದೀರಾ ಎಂಬ ಪ್ರಶ್ನೆ ಇದಿರಾಗುತ್ತದೆ. ವಿರೋಧಿಸಿದರೆ ವೈದ್ಯರು, ಎಂಜಿನಿಯರು, ಕಾಲೇಜು ಪ್ರಾಧ್ಯಾಪಕರ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಬೇಕೆ? ಬಡವರು ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುವುದು ಬೇಡವೆ ಎಂಬ ಪ್ರಶ್ನೆ ಇದಿರಾಗುತ್ತದೆ ಎಂದು ಸಂದಿಗ್ಧ ಪರಿಸ್ಥಿತಿಯನ್ನು ಪೂಜಾರಿಯವರೇ ಸಭೆಯ ಮುಂದಿಟ್ಟರು. 

ವಿಧಾನ ಪರಿಷತ್‌ ಸದಸ್ಯ ರಘು ಆಚಾರ್ಯರು ರಾಜ್ಯ ಸರಕಾರಿ ನೌಕರರು ಮತ್ತು ಗ್ರಾ.ಪಂ.ನಿಂದ ಹಿಡಿದು ಸಂಸದರವರೆಗಿನ ಜನಪ್ರತಿನಿಧಿಗಳ ಮಕ್ಕಳು ಸರಕಾರಿ ಶಾಲೆಗಳಿಗೆ ಹೋಗಬೇಕು ಎಂಬ ಖಾಸಗಿ ಮಸೂದೆಯನ್ನು ತಂದರು. ಇದು ಕಾನೂನಾಗಿ ಜಾರಿಗೊಳ್ಳುವುದು ಸಾಧ್ಯವೆ ಎಂಬ ಸಂಶಯ ನನಗೆ ಬಂತು. ಆದರೂ ನಾನು ಬೆಂಬಲಿಸಿದೆ. ಚರ್ಚೆಯಾಯಿತು, ಮತ್ತೇನಾಯಿತೋ ಗೊತ್ತಿಲ್ಲ ಎಂದು ಪೂಜಾರಿ ಹೇಳಿದರು.
 
ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಪ್ರಸ್ತಾವನೆಯಲ್ಲಿ ಸರಕಾರಿ ಶಾಲೆಗಳನ್ನು ಬಲಪಡಿಸಬೇಕಾದ ಅಗತ್ಯವಿದೆ. ಸರಕಾರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಬದಲು ಒಂದನೆಯ ತರಗತಿಯಿಂದ ಇಂಗ್ಲಿಷ್‌ ಕಲಿಯಲು ನೆರವಾಗುವಂತೆ ಶಿಕ್ಷಕರ ನೇಮಕ ಮಾಡಬೇಕು. ಡಾ| ಅನಂತಮೂರ್ತಿಯವರು ಹೇಳುವಂತೆ ಕನ್ನಡವನ್ನೂ ಇಂಗ್ಲಿಷನ್ನೂ ಕಲಿಸಬೇಕು ಎಂದು ಪ್ರತಿಪಾದಿಸಿದರು. 

Advertisement

ಖಾಸಗಿ ಶಾಲೆಗಳಲ್ಲಿ ಸಿರಿವಂತರು, ರಾಜಕಾರಣಿಗಳ ಪಾಲು!
48,000 ಸರಕಾರಿ ಶಾಲೆಗಳಿವೆ, ಒಂದು ಕೋಟಿ ಮಕ್ಕಳು ಓದುತ್ತಿದ್ದಾರೆ, 2.5 ಲಕ್ಷ ಶಿಕ್ಷಕರು, 1.5 ಲಕ್ಷ ಬಿಸಿಯೂಟ ಸಿಬಂದಿ  ಇದ್ದಾರೆ. 2.3 ಲ.ಕೋ.ರೂ. ಅನುದಾನದಲ್ಲಿ ಶೇ.18-19 ಶಿಕ್ಷಣಕ್ಕೆ ಮೀಸಲು ಇರುತ್ತದೆ. ಇಷ್ಟಾಗಿಯೂ 15,000 ಶಾಲೆಗಳಿಗೆ ಶೌಚಾಲಯಗಳಿಲ್ಲ. ಇದರಿಂದಾಗಿ ಖಾಸಗಿ ಶಾಲೆಗಳತ್ತ ಮಕ್ಕಳು ಹೋಗುತ್ತಿದ್ದಾರೆ. ಅರ್ಧಾಂಶ ಖಾಸಗಿ ಶಾಲೆಗಳು ಹಣ ಉಳ್ಳವರದ್ದೂ, ಅರ್ಧಾಂಶ ಶಾಲೆಗಳು ರಾಜಕಾರಣಿಗಳದ್ದೂ ಇದೆ. ಹೀಗಿರುವಾಗ ನಾವು ಯಾವ ನಿಲುವು ತಳೆಯಬಹುದು? ಸಾಮಾಜಿಕ ನ್ಯಾಯದ ಪ್ರಕಾರ ನಿರ್ಣಯ ತಳೆಯಬೇಕು. ಎಲ್ಲರಿಗೂ ಒಂದೇ ರೀತಿಯ ಏಕರೂಪೀ ಶಿಕ್ಷಣವನ್ನು ಜಾರಿಗೆ ತರಲು ಒತ್ತಾಯಿಸಬಹುದು. ಹೀಗೆ ನಿರ್ಣಯಿಸಿದ್ದೇ ಆದರೆ ಗುರಿ ಮುಟ್ಟಲು ಸಾಧ್ಯವೆ ಎಂದು ಪ್ರಶ್ನಿಸಿಕೊಂಡ ಕೋಟ ಶ್ರೀನಿವಾಸ ಪೂಜಾರಿಯವರು ಇಂತಹ ವಿಷಯಗಳ ಬಗ್ಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚೆ ನಡೆಯುವಂತಾಗಲಿ ಎಂದು ಹಾರೈಸಿದರು. 

Advertisement

Udayavani is now on Telegram. Click here to join our channel and stay updated with the latest news.

Next