ಬೆಂಗಳೂರು: ಅಲ್ಲಿ ಮಕ್ಕಳ ಕಲರವ ಝೇಂಕರಿಸಿತು. ಪುಟಾಣಿಗಳ ನಾಟಕ ಮತ್ತು ಸಂಗೀತ ನೃತ್ಯ ಸಭಿಕರಿಗೆ ಮುದು ನೀಡಿತು. ಸಿನಿ ನಟರು, ಸಂಗೀತ ನಿರ್ದೇಶಕರು, ರಾಜಕೀಯ ಮುಖಂಡರು ಸೇರಿದಂತೆ ಹಲವು ಗಣ್ಯರು ಈ ನಂದನಲೋಕದಲ್ಲಿ ಆನಂದದ ಕಡಲಲ್ಲಿ ತೇಲಿದರು. ವಿಕಲಚೇತನತೆ ಮರೆತ ಚಿಣ್ಣರು, ಸಭಿಕರ ಮುಂದೆ ಕುಣಿದು ಕುಪ್ಪಳಿಸಿ ಖುಷಿಪಟ್ಟರು.
ಇಂತಹ ಅನುಪಮ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು, ಬನಶಂಕರಿಯ 2ನೇ ಹಂತದಲ್ಲಿರುವ ಬಿಎನ್‌ಎಂ ಐಟಿ ಕಾಲೇಜು ಸಭಾಂಗಣ. ಮನೋನಂದನ ಕೇಂದ್ರ ಭಾನುವಾರ ಹಮ್ಮಿಕೊಂಡಿದ್ದ 22ನೇ ವಾರ್ಷಿಕೋತ್ಸವದಲ್ಲಿ ಕೇಂದ್ರದ ಬಹುವಿಧ ನ್ಯೂನತೆ ಹೊಂದಿದ ಮಕ್ಕಳು ನೆರೆದವರ ಕೇಂದ್ರ ಬಿಂದುವಾದರು.
ಮಕ್ಕಳ ಬಹುವಿಧ ನ್ಯೂನತೆಯನ್ನು ಕಂಡು ಮರುಗಿದ ಗಣ್ಯರು ಇಂತಹ ಮಕ್ಕಳಲ್ಲಿಯೂ ಒಂದು ಪ್ರತಿಭೆ ಇದೆ ಎಂಬುವುದನ್ನು ಸಭಿಕರಿಗೆ ಪರಿಚಯಿಸಿದ ಮನೋನಂದನ ಕೇಂದ್ರದ ಮುಖ್ಯಸ್ಥೆ ಡಾ.ಕುಸುಮಾ ಎನ್.ಭಟ್ ಮತ್ತವರ ತಂಡದ ಸಾಧನೆಯನ್ನು ಕೊಂಡಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ 57ನೇ ವಾರ್ಷಿಕ ಗ್ರಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್, ಮನೋನಂದನ ಕೇಂದ್ರದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಮುಖ್ಯ ಅತಿಥಿ, ಹಿರಿಯ ನಟ ರಮೇಶ್ ಭಟ್, ಈ ಪುಟಾಣಿಗಳ ನೃತ್ಯ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಖುಷಿ ಕೊಟ್ಟಿದೆ. ಮನೋನಂದನ ಕೇಂದ್ರವನ್ನು ಹುಟ್ಟುಹಾಕಿ ಇದರ ಬೆಳವಣಿಗೆಗೆ ಶ್ರಮಿಸುತ್ತಿರುವ ಕುಸುಮಾ ಭಟ್ಟ ಅವರ ಪರಿಶ್ರಮ ಎಲ್ಲರಿಗೂ ಮಾದರಿ ಎಂದು ಬಣ್ಣಿಸಿದರು.
ಇಂದಿನ ದಿನದಲ್ಲಿ ಶೇಕಡ 99 ರಷ್ಟು ಜನರು ಯಾವುದೇ ಕೆಲಸ ಮಾಡಿದಾಗಲೂ ಇದರಿಂದ ನನಗೇನು ಲಾಭ ಆಗುತ್ತದೆ ಎಂಬುವುದನ್ನು ಯೋಚನೆ ಮಾಡಿ ಕೆಲಸ ಮಾಡುತ್ತಾರೆ.ಆದರೆ ಕುಸುಮಾ ಭಟ್ಟ ಮತ್ತವರ ಮನೆಯವರು ಈ ಮಕ್ಕಳಿಗೆ ಕಲಿಕೆ ನೀಡುವುದರ ಜತೆಗೆ ಅವರ ಮಾನಸಿಕ ಬೆಳವಣಿಗೆಗೆ ತಮ್ಮ ಬದುಕನ್ನೆ ಮುಡುಪಾಗಿಟ್ಟಿದ್ದಾರೆ.ಇವರ ಸೇವೆ ಅನನ್ಯವಾದದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್ ಗಣಪತಿ ಹೆಗಡೆ ಗುಣಗಾನ ಮಾಡಿದರು.
ಪಾಲಿಕೆ ಬಜೆಟ್‌ನಲ್ಲಿ ಅನುದಾನ: ಮಾಜಿ ಮಹಾಪೌರ ಮತ್ತು ಪಾಲಿಕೆಯ ಸದಸ್ಯ ಬಿ.ಎಸ್.ಸತ್ಯನಾರಾಯಣ ಮಾತನಾಡಿ, ಮನೋನಂದನ ಕೇಂದ್ರಕ್ಕೆ ಹಣಕಾಸಿನ ನೆರವು ನೀಡುವ ಹಿನ್ನೆಲೆಯಲ್ಲಿ ಮುಂಬರುವ ಪಾಲಿಕೆ ಬಜೆಟ್‌ನಲ್ಲಿ 2 ಲಕ್ಷ ರೂ. ಅನುದಾನ ಕೊಡಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ಪದ್ಮಾವತಿ ಗಂಗಾಧರ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಮುದ್ದುಕೃಷ್ಣ, ಸನ್ಸೇರ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್. ಸಿಂ Ì, ಬಿಎನ್‌ಎಂ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನಾರಾಯಣ ರಾವ್ ಮಾನೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.