Advertisement

ಮಕ್ಕಳ ಪ್ರತಿಭೆಗೆ ವೇದಿಕೆ ನಿರ್ಮಾಣದ ಅಗತ್ಯವಿದೆ: ಪ್ರಕಾಶ್‌ ಶೆಟ್ಟಿ

02:28 PM Oct 23, 2019 | Team Udayavani |

ಮುಂಬಯಿ, ಅ. 22: ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್‌ ಟ್ರಸ್ಟ್‌ ಮುಂಬಯಿ ದಶಮಾನೋತ್ಸವ ಸರಣಿ ಕಾರ್ಯಕ್ರಮ-3 ಖಾರ್‌ ವಿಭಾಗದ ಪ್ರಥಮ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ಅ. 20ರಂದು ಅಪರಾಹ್ನ 3ರಿಂದ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ನಡೆಯಿತು.

Advertisement

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್‌ ಟ್ರಸ್ಟ್‌ ಇದರ ಗೌರವಾಧ್ಯಕ್ಷ ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ ವಹಿಸಿ ಮಾತನಾಡಿ, ಯಕ್ಷಗಾನ ಕಲೆಯು ದೈವೀ ಪ್ರತೀಕವಾಗಿದೆ. ಯಕ್ಷಗಾನ ಹರಕೆಯ ಸೇವೆ ಬಹುದೊಡ್ಡ ಸೇವೆ. ಇಷ್ಟಾರ್ಥ ಸಿದ್ಧಿ-ಸಾಧನೆಗೆ ಯಕ್ಷಗಾನವೇ ಮೂಲ. ಯಕ್ಷಗಾನದ ಮೂಲ ಉಗಮ ಸ್ಥಾನವೇ ದೇವಸ್ಥಾನ. ಮಹಾನಗರದಲ್ಲೂ ತುಳು-ಕನ್ನಡಿಗರ ದೇವಸ್ಥಾನದ ಸಮಿತಿಯು ಯಕ್ಷಗಾನಕ್ಕೆ ವಿಶೇಷವಾದ ಪ್ರೋತ್ಸಾಹ, ಸಹಕಾರ ನೀಡುತ್ತಿರುವುದರಿಂದ ಮಹಾನಗರದಲ್ಲಿ ಯಕ್ಷಗಾನಕ್ಕೆ ಭದ್ರ ಅಡಿಪಾಯ ದೊರೆತಿದೆ.

ಯಕ್ಷಗಾನ ಗಂಡುಕಲೆಗೆ ಇಂದು ಸ್ತ್ರೀ ಶಕ್ತಿ ದೊರೆತಿರುವುದರಿಂದ ಕಲೆ ಸೀಮಿತವಾಗಿರದೇ ವಿಸ್ತಾರವಾಗಿ ಬೆಳೆತು ನಿಂತಿದೆ. ಗಂಡು-ಹೆಣ್ಣಿನ ತಾರತಮ್ಯವಿಲ್ಲದೆ ಸಮಾನತೆಯನ್ನು ಮೂಡಿಸಿದ ಯಕ್ಷಗಾನ ಕಲೆಯು ವಿಶ್ವವ್ಯಾಪಿಯಾಗಿದೆ. ಮಕ್ಕಳ ಪ್ರತಿಭೆಯ ಸವಿ ಸಮಾಜಕ್ಕೆ ದೊರೆಯಬೇಕಾದರೆ ಅದಕ್ಕೆ ಇಂತಹ ವೇದಿಕೆ ನಿರ್ಮಾಣವಾಗಬೇಕು. ಮಕ್ಕಳಿಗೆ ಪ್ರಶಸ್ತಿ ನೀಡುವಾಗ ಮಕ್ಕಳು ಭವಿಷ್ಯದಲ್ಲಿ ಕಲೆಯ ಅಭಿವೃದ್ಧಿಯ ಸಮಗ್ರ ಚಿಂತನೆ ಹೊಂದಬೇಕು ಎಂಬ ಉದ್ಧೇಶದಿಂದ ನೀಡುವ ಪುರಸ್ಕಾರವಾಗಿದೆ. ಮುಂದೆ ಜರಗಲಿರುವ ದಶಮಾನೋತ್ಸವ ಸರಣಿ ಕಾರ್ಯಕ್ರಮಕ್ಕೆ ಹಾಗೂ ಸಮಾರೋಪ ಸಮಾರಂಭಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರು ಮಾತನಾಡಿ, ಪ್ರೇಕ್ಷಕರ ಪ್ರೇರಣೆಯಿಂದ ನವರಸಭರಿತ ಯಕ್ಷಗಾನ ಕಲೆ ನಮ್ಮ ತುಳುನಾಡಿನ ಸರ್ವಶ್ರೇಷ್ಟ ಕಲೆಯಾಗಿದ್ದು, ನಿರಂತರ ಯಕ್ಷಕಲಾ ಸೇವೆಯಲ್ಲಿ ನಿರತರಾಗಿರುವ ಕಟೀಲು ಸದಾನಂದ ಶೆಟ್ಟಿಯವರ ಈ ಕಲಾಸೇವೆ ತಾಂತ್ರಿಕ ಲೋಕದ ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ಮಾದರಿಯಾಗಿದೆ. ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು ಪ್ರಸ್ತುತ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ಯಕ್ಷಗಾನ ಸೇವೆಯಲ್ಲಿ ಮಹತ್ತರಪಾತ್ರವಹಿಸಿದ ಎಲ್ಲಾ ಕಲಾವಿದರನ್ನು ಗುರುತಿಸಿ ಗೌರವಿಸಲಾಗುವುದು.

ತುಳುನಾಡಿನ ದೀಮಂತ ಕಲೆಯನ್ನು ತುಳುನಾಡಿನ ಕಲಾವಿದರಿಂದಲೇ ಉಳಿಸಲು ಸಾಧ್ಯ ಎಂಬುವುದನ್ನು ಇಂದು ಆಂಗ್ಲ ಮಾಧ್ಯಮದ ಮಕ್ಕಳು ಸಾಧಿಸಿ ತೋರಿಸಿದ್ದಾರೆ. ಬಿಲ್ಲವರ ಅಸೋಸಿಯೇಶನ್‌ ಕಲೆ, ಸಂಸ್ಕೃತಿಗೆ ಸದಾ ಸಹಕಾರ ನೀಡುತ್ತಿದ್ದು, ರಿಯಾಯಿತಿ ದರದಲ್ಲಿ ಸಭಾಗೃಹವನ್ನು ಒದಗಿಸುತ್ತಿದೆ. ಆ ಮೂಲಕ ಅಸೋಸಿಯೇಶನ್‌ ಜನನಾಯಕ ಜಯ ಸುವರ್ಣ ಚಿಂತನೆಯನ್ನು ಸದಾ ಬೆಂಬಲಿಸುತ್ತಿದೆ ಎಂದು ನುಡಿದರು.

Advertisement

ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್‌ ಟ್ರಸ್ಟ್‌ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ಯಾಮ್‌ ಎಂ. ಶೆಟ್ಟಿ, ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಶುಭಾಂಗಿ ಎಸ್‌. ಶೆಟ್ಟಿ, ಖಾರ್‌ ಪೂರ್ವದ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಟ್ರಸ್ಟಿ ಸಿಎ ಪ್ರಕಾಶ್‌ ಶೆಟ್ಟಿ ಮತ್ತು ಅಧ್ಯಕ್ಷ ಶಂಕರ್‌ ಕೆ. ಸುವರ್ಣ, ರಂಗಮಿಲನ ಮುಂಬಯಿ ಅಧ್ಯಕ್ಷ ಮನೋಹರ ಶೆಟ್ಟಿ ನಂದಳಿಕೆ, ಹೈಕೋರ್ಟ್‌ ನ್ಯಾಯವಾದಿ ಸೌಮ್ಯಾ ಸಿ. ಪೂಜಾರಿ, ಸುಮತಿ ಶೆಟ್ಟಿ, ಶ್ರೀಧರ ಪೂಜಾರಿ, ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್‌ ಟ್ರಸ್ಟ್‌ ಇದರ ಖಾರ್‌ ಸಮಿತಿಯ ಮುಖ್ಯಸ್ಥೆ ಗೀತಾ ದೇವಾಡಿಗ, ಭ್ರಾಮರಿ

ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್‌ ಟ್ರಸ್‌ ನ ಟ್ರಸ್ಟಿ ಕೃಷ್ಣರಾಜ್‌ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಯಕ್ಷ ಭ್ರಾಮರಿ ಪ್ರಶಸ್ತಿಯನ್ನು ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್‌ ಸಂಸ್ಥೆಗೆ, ಭ್ರಮರ ವನಿತಾ ಪ್ರಶಸ್ತಿಯನ್ನು ಭರತನಾಟ್ಯ, ರಂಗಕಲಾವಿದೆ ದೀಕ್ಷಾ ಎಲ್‌. ದೇವಾಡಿಗ, ಭ್ರಮರ ಚೇತನ ಪುರಸ್ಕಾರವನ್ನು ರಕ್ಷಾ ದೇವಾಡಿಗ ಮತ್ತು ಶೋಭಾ ಪೂಜಾರಿ ಇವರಿಗೆಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು.

ಟ್ರಸ್ಟಿನ ಗೌರವ ಕಾರ್ಯದರ್ಶಿ ವಿಜಯ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸ್ಮಿತಾ ಶೆಟ್ಟಿ ಅವರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗುರು ಕಟೀಲು ಸದಾನಂದ ಶೆಟ್ಟಿ ಅವರ ನಿರ್ದೇಶನದಲ್ಲಿ ಶಿಬಿರದ ಹವ್ಯಾಸಿ ಕಲಾವಿದರಿಂದ ಮತ್ತು ಬಾಲ ಪ್ರತಿಭೆಗಳಿಂದ ಮಹಿಷ ಮರ್ದಿನಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಜಯಕ್ಷ್ಮೀ ದೇವಾಡಿಗ ಮತ್ತು ಕಟೀಲು ಸದಾನಂದ ಶೆಟ್ಟಿ, ಮದ್ದಳೆಯಲ್ಲಿ ಆನಂದ್‌ ಎಂ. ಶೆಟ್ಟಿ ಇನ್ನ, ಹರೀಶ್‌ ಎನ್‌. ಸಾಲ್ಯಾನ್‌, ಚೆಂಡೆಯಲ್ಲಿ ಪ್ರವೀಣ್‌ ಶೆಟ್ಟಿ ಎಕ್ಕಾರು, ಚಕ್ರತಾಳದಲ್ಲಿ ಮಾ| ಆಶೀಷ್‌ ಆರ್‌. ದೇವಾಡಿಗ ಹಾಗೂ ವೇಷಭೂಷಣದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಾಕಿನಾಕಾ ಇವರು ಸಹಕರಿಸಿದರು. ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್‌ ಪೂರ್ವ, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕಲಾಮಿತ್ರ ಮಂಡಳಿ ಸಾಕಿನಾಕಾ, ಯೋಗೇಶ್‌ ಹೆಜ್ಮಾಡಿ ಅವರ ವಿಶೇಷ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸಂಸ್ಥೆಯ ಟ್ರಸ್ಟಿಗಳಾದ ಕಟೀಲು ಸದಾನಂದ ಶೆಟ್ಟಿ, ಶೆಟ್ಟಿ, ಚೇತನಾ ಎಸ್‌. ಶೆಟ್ಟಿ, ಶಾರದಾ ಜೆ. ಶೆಟ್ಟಿ, ಸುಶೀಲಾ ಸಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ಸುಮತಿ ಆರ್‌. ಶೆಟ್ಟಿ, ಸುರೇಂದ್ರ ಕುಮಾರ್‌ ಹೆಗ್ಡೆ, ಲಕ್ಷ್ಮಣ್‌ ಕಾಂಚನ್‌, ಅರವಿಂದ್‌ ಶೆಟ್ಟಿ ಕೊಜಕ್ಕೊಳಿ, ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ, ಜನಾರ್ದನ ಪೂಜಾರಿ, ಗೌರವ ಕಾರ್ಯದರ್ಶಿ ವಿಜಯ ಪಿ. ಶೆಟ್ಟಿ, ಜತೆ ಕಾರ್ಯದರ್ಶಿ ಸ್ಮಿತಾ ಎಸ್‌. ಶೆಟ್ಟಿ, ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಸುನಿಲ್‌ ಶೆಟ್ಟಿ, ಜತೆ ಕಾರ್ಯದರ್ಶಿ ದಿವ್ಯಾ ಜೆ. ಶೆಟ್ಟಿಗಾರ್‌, ಗೌರವ ಕೋಶಾಧಿಕಾರಿ ಮಹೇಶ್‌ ಶೆಟ್ಟಿ ನಕ್ರೆ, ಜತೆ ಕೋಶಾಧಿಕಾರಿ ಪ್ರವೀಣ್‌ ಶೆಟ್ಟಿ, ವಿಭಾಗದ ಪ್ರಮುಖೆ ಗೀತಾ ಎಲ್‌. ದೇವಾಡಿಗ ಮೊದಲಾದವರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು.

 

-ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next