ಶಹಾಪುರ: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ತೀವ್ರತರವಾದ ಸ್ಪರ್ಧೆ ಇದ್ದು, ಅಂತಹ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ಮಾಹಿತಿ ತಂತ್ರಜ್ಞಾನದ ಜ್ಞಾನ ಕರಗತ ಮಾಡಿಕೊಳ್ಳಬೇಕೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಲಹೆ ನೀಡಿದರು.
ರಸ್ತಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಮೂರು ನೂತನ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲಂ-371ಜೆ ಜಾರಿಯಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹಲವಾರು ರೀತಿ ಸೌಲಭ್ಯ ದೊರೆತಿವೆ. ಸರ್ಕಾರಿ ನೌಕರಿ ಪಡೆಯುವಲ್ಲಿ ಅನುಕೂಲವಾಗಿದೆ. ಕಲ್ಯಾಣ ಕರ್ನಾಟಕ ಭಾಗದವರು ಕೆಎಎಸ್ ಅಧಿಕಾರಿಗಳು, ವೈದ್ಯರು, ಇಂಜಿನಿಯರ್, ಉಪನ್ಯಾಸಕರು ಮತ್ತು ಶಿಕ್ಷಕರಾಗಿ ನೇಮಕಗೊಳ್ಳುತ್ತಿದ್ದಾರೆ. ಇನ್ನೂ ಹಲವಾರು ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ನಡೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧರಾಗಬೇಕು. ಆ ನಿಟ್ಟಿನಲ್ಲಿ ನಿರಂತರ ಅಭ್ಯಾಸ ಮಾಡಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಪಾಟೀಲ್ ಮಾತನಾಡಿ, ಕಳೆದ ವರ್ಷ ಯಾದಗಿರಿ ಜಿಲ್ಲೆ 112 ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿ ಸಿದಂತೆ 15ನೇ ಶ್ರೇಣಿ ಪಡೆದಿತ್ತು. ಈ ತಿಂಗಳು ನಮ್ಮ ಜಿಲ್ಲೆ ಶೈಕ್ಷಣಿಕ ಗುಣಮಟ್ಟದಲ್ಲಿ 2ನೇ ಶ್ರೇಣಿ ಪಡೆದಿರುವುದು ಖುಷಿಯ ಸಂಗತಿಯಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕಲ್ಪಿಸುತ್ತಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ರಸ್ತಾಪುರ ಶಾಲೆ ಮಾದರಿಯಾಗಿದೆ ಎಂದರು. ಮುಖ್ಯಗುರು ಮಲ್ಲನಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಯಪ್ಪಗೌಡ ಹುಡೇದ, ಗ್ರಾಪಂ ಅಧ್ಯಕ್ಷ ವಿಶ್ವನಾಥ ರಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಹೊಸ್ಮನಿ, ನಾಗಣ್ಣ ಪೂಜಾರಿ, ಸಣ್ಣನಿಂಗಪ್ಪ ನಾಯ್ಕೋಡಿ, ಶಂಬನಗೌಡ ಮಾಲಿಪಾಟೀಲ್, ಶರಬಣ್ಣ ಅಂಗಡಿ, ಅಮರಪ್ಪ ಜೇಗರಿ, ಅಂಬಿಕೇಶ್ವರಸ್ವಾಮಿ ಉಪಸ್ಥಿತರಿದ್ದರು.