ಹುಬ್ಬಳ್ಳಿ: ಹರಿಭಕ್ತಿ ನಿರಂತರವಾಗಿದ್ದು, ಸಂಸ್ಕಾರ, ಸಂಪ್ರದಾಯ ನಮ್ಮ ಆಸ್ತಿಯಾಗಿದೆ. ಅದನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುತ್ತ ಸಾಗಿದರೆ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಮಂತ್ರಾಲಯ ವಿದ್ಯಾಪೀಠದ ಪ್ರಾಚಾರ್ಯ ರಮಣರಾವ್ ಹೇಳಿದರು.
ಭವಾನಿ ನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಟಿಟಿಡಿ ದಾಸ ಸಾಹಿತ್ಯ ಪ್ರೊಜೆಕ್ಟ್ ಮತ್ತು ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಜಯದಾಸರ ಆರಾಧನಾ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಾಸರ ಕೀರ್ತನೆಗಳನ್ನು ಕಲಿಯುವುದು, ಅವರು ಕಲಿಸಿದ ಆಚಾರ-ವಿಚಾರ ಹಾಗೂ ಸಂಸ್ಕೃತಿ ಮುಂದಿನ ಪೀಳಿಗೆಗೆ ಕಲಿಸುವುದು ನಮ್ಮ ಕರ್ತವ್ಯ. ಇದೇ ನಿಜವಾದ ಆಸ್ತಿ ಆಗಲಿದೆ. ದಾಸರ ಸುಳಾದಿಗಳು ಹಾಗೂ ಹರಿಕಥಾಮೃತವನ್ನು ಮೊದಲು ನಾವು ತಿಳಿದುಕೊಳ್ಳಬೇಕು. ಅದನ್ನು ನಮ್ಮ ಮಕ್ಕಳಿಗೆ ಹೇಳಿ ಕೊಡುವ ಮೂಲಕ ದಾಸರ ಸ್ಮರಣೆ ನಿರಂತರವಾಗಿರುವಂತೆ ನೋಡಿಕೊಳ್ಳಬೇಕು.
ಹಣ ಸಂಪತ್ತು ಕೂಡಿಡುವ ಬದಲಾಗಿ ಮಕ್ಕಳಿಗಾಗಿ ಸಂಸ್ಕಾರದ ಉಡುಗೊರೆ ನೀಡಬೇಕು. ಗುರುರಾಯರ ತತ್ವ ಪಾಲನೆ ಬಗ್ಗೆ ಗಮನಹರಿಸಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಿದಾಗ ಮಾತ್ರ ಹಿರಿಯರ ಜೀವನ ಸಾರ್ಥಕ ಆಗುತ್ತದೆ ಎಂದರು. ಶ್ರೀಮಠದ ಗೋಪಾಲ ಕುಲಕರ್ಣಿ ಮಾತನಾಡಿ, ಧರ್ಮವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೋಡಿಕೊಳ್ಳಬೇಕು. ಸಂಘಟಿತರಾಗಿ ಮುಂದುವರಿದರೆ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸಮಾರೋಪ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ದಾಸರಿಗೆ ಅಭಿಷೇಕ ಪಂಚಾಮೃತ, ವಿಜಯದಾಸರ ಕವಚ ಪಾರಾಯಣ, ರಥೋತ್ಸವ, ಶ್ರೀಮನ್ಯೂಸೂಕ್ತ ಹೋಮ ನಡೆದವು. ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ವಿಜಯದಾಸರ ಕವಚ ಅರ್ಥ ಸ್ಪರ್ಧೆ, ಸುಳಾದಿಗಳು, ವಿಜಯದಾಸರ ಜೀವನಚರಿತ್ರೆ, ಹಾಡಿನ ಸ್ಪರ್ಧೆ, ವೇಷಭೂಷಣ ಸ್ಪರ್ಧೆಗಳಲ್ಲಿ ವಿಜೆತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಠದ ಧರ್ಮಾಧಿಕಾರಿ ರಾಘವೇಂದ್ರ ಆಚಾರ್ಯ ನಂಜನಗೂಡು, ವೆಂಕಟೇಶ ಆಚಾರ್ಯ, ರಘೋತ್ತಮ ಆಚಾರ್ಯ, ವ್ಯವಸ್ಥಾಪಕ ಶ್ರೀಧರ ವಿ.ಎನ್., ಬದರಿನಾರಾಯಣ ಆಚಾರ್ಯ, ಧೂಳಖೇಡ ನಾರಾಯಣ ಆಚಾರ್ಯ, ಸಮೀರಾಚಾರ್ಯ ಕಂಠಪಲ್ಲಿ, ಎ.ಸಿ. ಗೋಪಾಲ, ರಾಘವೇಂದ್ರ ಗಂಡಮಾಲಿ, ವಾದಿರಾಜ ಭಟ್, ಪ್ರಭುರಾಜ ಅಪರಂಜಿ, ಅರುಣ ಅಪರಂಜಿ, ರಘುವೀರ ಆಚಾರ್ಯ, ಶ್ರೀರಂಗ ಹನುಮಸಾಗರ, ಮನೋಹರ ಪರ್ವತಿ, ಧೂಳಖೇಡ ನಾರಾಯಣ ಆಚಾರ್ಯ, ವನಜಾ ಕಾತೋಟಿ ಮೊದಲಾದವರಿದ್ದರು.