Advertisement
ಹುಬ್ಬಳ್ಳಿ: ಮೊಬೈಲ್ ಮುಟ್ಟಬೇಡ, ಹೆಚ್ಚು ಟಿವಿ ನೋಡಬೇಡ, ಕಂಪ್ಯೂಟರ್-ಲ್ಯಾಪ್‌ಟಾಪ್ ಮುಂದೆ ಕೂಡಬೇಡ ಎಂದು ಬುದ್ಧಿ ಹೇಳುತ್ತಿದ್ದ, ಬೈಯುತ್ತಿದ್ದ ಪಾಲಕರೇ ಇಂದು ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್, ಟ್ಯಾಬ್ ಹಾಗೂ ಲ್ಯಾಪ್‌ಟಾಪ್‌ಗ್ಳನ್ನು ಮಕ್ಕಳಿಗೆ ನೀಡಬೇಕಿದೆ. ಇದರಿಂದ ಅವರ ನೇತ್ರ ಆರೋಗ್ಯ ಮೇಲಾಗುವ ದುಷ್ಪರಿಣಾಮ ತಪ್ಪಿಸಲು ಸೂಕ್ತ ಕಾಳಜಿ-ಮುಂಜಾಗ್ರತೆ ಅತ್ಯವಶ್ಯ. ಹೀಗೆಂದವರು ಬೆಳಗಾವಿಯ ಆಯುಷ್ ಆಸ್ಪತ್ರೆಯ ಜೀವಕ ನೇತ್ರ ವಿಭಾಗದ ತಜ್ಞ ವೈದ್ಯ ಡಾ|ಚಂದ್ರಶೇಖರ ಸಿದ್ದಾಪುರ.
Related Articles
Advertisement
ಕಂಪ್ಯೂಟರ್, ಮೊಬೈಲ್ ಪರದೆಯಿಂದ ಹೊರಸೂಸುವ ವಿಕಿರಣಗಳು, ಪರದೆಯಲ್ಲಿ ಅಳವಡಿಸಲಾದ ಪ್ರಕಾಶಮಾನ ಬೆಳಕಿನ ಸಲಕರಣೆಗಳು, ಕಂಪ್ಯೂಟರ್, ಮೊಬೈಲ್ ಗಳನ್ನು ಅವೈಜ್ಞಾನಿಕ ಅಂತರದಲ್ಲಿ ಇರಿಸಿಕೊಂಡು ವೀಕ್ಷಣೆ ಸೇರಿದಂತೆ ವಿವಿಧ ಕಾರಣಗಳಿಂದ ನೇತ್ರ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಮಕ್ಕಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇವು ಕಾಣಿಸಿಕೊಳ್ಳಲಾರಂಭಿಸುತ್ತವೆ. ಇಂತಹ ರೋಗ ಲಕ್ಷಣ ಇದ್ದವರಲ್ಲಿ ಅತಿಯಾದ ಕಣ್ಣಿನ ನೋವು, ವಿಪರೀತ ಉರಿ ಮತ್ತು ತೇವಾಂಶ ಇಲ್ಲದಿರುವುದು, ಅಸ್ಪಷ್ಟ ದರ್ಶನ, ಪ್ರಕಾಶ ಅಸಹಿಷ್ಣುತೆ, ತಲೆನೋವು ಇನ್ನಿತರೆ ಸಮಸ್ಯೆಗಳು ಕಾಣತೊಡಗುತ್ತವೆ. ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್‌ಗ್ಳ ಪರದೆಯಿಂದ ಬೀರುವ ಬೆಳಕು ಮಕ್ಕಳ ಕಣ್ಣಿನ ಮೇಲೆ ಪ್ರತಿಫಲನಗೊಳ್ಳದಂತೆ ಸರಿಯಾದ ಬೆಳಕಿನ ವ್ಯವಸ್ಥೆ ಕೈಗೊಳ್ಳಬೇಕು. ಆ್ಯಂಟಿಗ್ಲೆರ್ ಸ್ಕ್ರಿನ್ ಉಪಯೋಗಿಸಬೇಕಿದೆ. ಜತೆಗೆ ಮಕ್ಕಳಿಗೆ ಆನ್ ಲೈನ್ ತರಗತಿ ವೀಕ್ಷಣೆ ವೇಳೆ ಸಾಕಷ್ಟು ಬಾರಿ ಕಣ್ಣು ಪಿಳುಕಿಸುವ ತಿಳಿವಳಿಕೆ ನೀಡಬೇಕಿದೆ. ಜತೆಗೆ ಕಣ್ಣಿನ ಆರೋಗ್ಯ ಸಂರಕ್ಷಣೆಗೆ ಕೆಲ ಸರಳ-ಸುಲಭ ವ್ಯಾಯಾಮಗಳಿದ್ದು ಅವುಗಳನ್ನು ತಿಳಿಸುವ, ಮಕ್ಕಳನ್ನು ಯೋಗದಲ್ಲಿ ತೊಡಗಿಸುವ ಕೆಲಸ ಮಾಡಬೇಕಿದೆ. ನೇತ್ರ ವ್ಯಾಯಾಮದಿಂದ ನೇತ್ರ ನರಗಳಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿ, ನೇತ್ರಗಳ ಆರೋಗ್ಯಕ್ಕೆ ಅನುಕೂಲವಾಗಲಿದೆ.