Advertisement

ಕೈಯಲ್ಲಿ ಮೊಟ್ಟೆ ಹಿಡಿದು ಮಕ್ಕಳ ಪ್ರತಿಭಟನೆ

11:11 AM Dec 23, 2021 | Team Udayavani |

ಜೇವರ್ಗಿ: ಮಠಾಧೀಶರ ಒತ್ತಡಕ್ಕೆ ಮಣಿಯದೇ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ ಯೋಜನೆ ಸರ್ಕಾರ ಕೈ ಬಿಡಬಾರದು ಎಂದು ಒತ್ತಾಯಿಸಿ ಮಕ್ಕಳ ಕೂಟದ ವತಿಯಿಂದ ಮಕ್ಕಳು ಮೊಟ್ಟೆ, ಬಾಳೆಹಣ್ಣು ಕೈಯಲ್ಲಿ ಹಿಡಿದು ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ದೇಶದಲ್ಲಿ ಬಡತನ, ನಿರುದ್ಯೋಗ, ಅಪೌಷ್ಟಿಕತೆ ತಾಂಡವವಾಡುತ್ತಿದೆ. ಕಲಬುರಗಿ ಜಿಲ್ಲೆಯ ಮಕ್ಕಳಲ್ಲಿ ಶೇ.74ಕ್ಕಿಂತಲೂ ಹೆಚ್ಚು ಅಪೌಷ್ಟಿಕತೆ ಇದೆ. ಇದು ಅತ್ಯಂತ ತಲ್ಲಣದ ವಿಷಯ ಎಂಬುದು ಕೆಲವರಿಗೆ ಅರ್ಥವಾಗುತ್ತಿಲ್ಲ. ಮಠಾಧೀಶರಿಗೆ ಈ ವಿಷಯ ಗಂಭೀರವಾಗಿ ಕಾಣುತ್ತಿಲ್ಲ. ಕೆಲ ಮಠಾಧಿಧೀಶರು ಸಮಾಜದಲ್ಲಿ ಅವೈಜ್ಞಾನಿಕ ಚಿಂತನೆ ಹರಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ, ಹಿಂದುಳಿದ, ಬಡತನದಲ್ಲಿ ಹೆಚ್ಚಿರುವ ಮಕ್ಕಳೇ ಸರ್ಕಾರಿ ಶಾಲೆಗೆ ಹೆಚ್ಚಾಗಿ ಹೋಗುತ್ತಾರೆ. ಈ ಮಕ್ಕಳಿಂದ ಪೌಷ್ಟಿಕ ಆಹಾರ ಕಿತ್ತುಕೊಳ್ಳುವುದು ಎಂದರೆ ಎಲ್ಲ ಮಕ್ಕಳಿಗೂ ಪೌಷ್ಟಿಕ ಆಹಾರ ದೊರೆಯದಂತೆ ಮಾಡುವುದಾಗಿದೆ. ಆದ್ದರಿಂದ ಯಾರ ಮಾತಿಗೂ ಕಿವಿಗೊಡದೇ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಡುವ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್‌ ವಿನಯಕುಮಾರ ಪಾಟೀಲ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಸುಭಾಷ ಹೊಸಮನಿ, ಪರಶುರಾಮ ಬಡಿಗೇರ, ತಾಯಪ್ಪ ಹೊಸಮನಿ, ಜೈಭೀಮ ಕಟ್ಟಿಮನಿ, ಅನುಸೂಯಾ ಟಣಕೇದಾರ, ರೇವುನಾಯಕ ರೇವನೂರ, ಮಲ್ಕಪ್ಪ ಹರನೂರ, ಮಲ್ಲಪ್ಪ ಹರನೂರ, ಶಂಕರಲಿಂಗ ಹನ್ನೂರ ರೇವನೂರ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next