Advertisement

ಪಿಎಚ್‌ಸಿ ವ್ಯಾಪ್ತಿ ಪ್ರತಿ ಶಾಲೆಯಲ್ಲಿ ಚಿಲ್ಡ್ರನ್‌ ಹೆಲ್ತ್‌ಕ್ಯಾಂಪ್‌

05:43 PM Aug 10, 2021 | Team Udayavani |

ಮೈಸೂರು: ಸಂಭವನೀಯ ಕೋವಿಡ್‌ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ತಜ್ಞರ ಎಚ್ಚರಿಕೆ ಮೇರೆಗೆ ಮಕ್ಕಳ ಸಮಗ್ರ ಆರೋಗ್ಯ ರಕ್ಷಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ) ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಯಲ್ಲಿ ಚಿಲ್ಡ್ರನ್‌ ಹೆಲ್ತ್‌ ಕ್ಯಾಂಪ್‌ ಪ್ರಾರಂಭಿಸಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಸಿಎಂ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೈಸೂರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಪಂಚಾಯ್ತಿ ಕಚೇರಿಯ ದೇವರಾಜ ಅರಸು ಸಭಾಂಗಣದಲ್ಲಿ ಕೋವಿಡ್‌ 3ನೇ ಅಲೆ ಸ್ಥಿತಿಗತಿ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಕ್ಕಳ ಆರೋಗ್ಯದ ಬಗ್ಗೆಕಾಳಜಿ ವಹಿಸುವಂತೆ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಒಂದು ಶಾಲೆಯಲ್ಲಿ ಚಿಲ್ಡ್ರನ್‌ ಹೆಲ್ತ್‌ಕ್ಯಾಂಪ್‌ ಪ್ರಾರಂಭಿಸುತ್ತೇವೆ. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಚಿಲ್ಡ್ರನ್‌ ಹೆಲ್ತ್‌ ಕ್ಯಾಂಪ್‌ ಗಳಲ್ಲಿ  6ರಿಂದ 14 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು. ಆರೋಗ್ಯ ಇಲಾಖೆ ಪೌಷ್ಟಿತೆ ಹೆಚ್ಚಿಸುವ ಔಷಧ ಕೊಡಬೇಕು. ಶೇ.40 ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಕಾಯಿಲೆ ಇರುವ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು
ಎಂದು ವಿವರಿಸಿದರು.

ಕೋವಿಡ್‌ 3ನೇ ಅಲೆ ಬರಬಾರದೆಂದು ಪ್ರಾರ್ಥಿಸುವೆ. ಬಂದಂತಹ ಸಂದರ್ಭದಲ್ಲಿ ಏನೆಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂಬುದರ ಕುರಿತು ಚರ್ಚೆಮಾಡಿದ್ದೇವೆ.ಕಳೆದಬಾರಿ ಕೇರಳ,ಮಹಾರಾಷ್ಟ್ರದಲ್ಲಿ ಹೆಚ್ಚಾದ್ದರಿಂದ ರಾಜ್ಯವೂ ಅದರ ಪರಿಣಾಮ ಎದುರಿಸಬೇಕಾಯಿತು. ಸದ್ಯಕ್ಕೆ ಮುಂಜಾಗ್ರತೆಯಾಗಿ ತಜ್ಞರು, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಬಿಗಿ ಕ್ರಮಕೈಗೊಳ್ಳಲಾಗಿದೆ ಎಂದರು.

Advertisement

ಬಿಗಿ ತಪಾಸಣೆ: ರಾಜ್ಯದ ಗಡಿ ಭಾಗಗಳಲ್ಲಿ ಬಿಗಿ ತಪಾಸಣೆ ಮಾಡಬೇಕು. ಸಿಬ್ಬಂದಿ ಹಿಂದೆ 1 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ 3 ಪಾಳಿಯೂ ಕೆಲಸ ಮಾಡಬೇಕು. ಜೊತೆಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ಮಾಡುತ್ತಿರುವವರು 2 ಡೋಸ್‌ ಲಸಿಕೆ ಹಾಕಿಸಿ ಕೊಂಡಿರಬೇಕು ಎಂದು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

14 ಆಕ್ಸಿಜನ್‌ ಜನರೇಟರ್‌ ಮಂಜೂರು: ಮೈಸೂರು ಜಿಲ್ಲೆಗೆ 14 ಆಕ್ಸಿಜನ್‌ ಜನರೇಟರ್‌ ಮಂಜೂರಾಗಿದೆ. ಈಗಾಗಲೇ 3 ಕಮಿಷನ್‌ ಆಗಿದ್ದು, 6 ವಾರದೊಳಗೆ ಕಮಿಷನ್‌ ಆಗಲಿದೆ. 5 ಬರಬೇಕಾಗಿದೆ. ಅವುಗಳನ್ನು ಶೀಘ್ರದಲ್ಲೇ ಒದಗಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿದೆ. ಐಸಿಯು ಟ್ಯಾಂಕರ್‌ ಸ್ಟೋರೇಜ್‌ ಇರಬೇಕು. ಪೈಪಿಂಗ್‌ ಸರಿಪಡಿಸಬೇಕು. ಮಕ್ಕಳಿಗೆ 20 ವೆಂಟಿಲೇಟರ್‌ ಕೇಳಿದ್ದಾರೆ ಎಂದು
ಮುಖ್ಯಮಂತ್ರಿಗಳು ವಿವರಿಸಿದರು.

ಸಭೆಯಲ್ಲಿ ಸಚಿವರಾದಎಸ್‌.ಟಿ.ಸೋಮಶೇಖರ್‌, ಭೈರತಿ ಬಸವರಾಜು, ಡಾ.ಕೆ.ಸುಧಾಕರ್‌, ಸಿ.ನಾರಾಯಣಗೌಡ, ಶಾಸಕರಾದ ಎಲ್‌.ನಾಗೇಂದ್ರ, ಬಿ. ಹರ್ಷವರ್ಧನ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌,ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಪಂ ಸಿಇಒ ಎ.ಎಂ.ಯೋಗೀಶ್‌,  ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್‌, ಪಾಲಿಕೆ ಆಯುಕ್ತ ಲಕ್ಷ್ಮೀ ಕಾಂತರೆಡ್ಡಿ ಇತರರಿದ್ದರು.

ಇದನ್ನೂ ಓದಿ:ನಾನು ರಾಜಕಾರಣ ಮಾಡೋಕೆ ಬಂದವನು, ಕಬ್ಬನ್ ಪಾರ್ಕ್ ನೋಡೋಕೆ ಬಂದಿಲ್ಲ: ಪ್ರೀತಂ ಗೌಡ

ಜಿಲ್ಲೆಯಲ್ಲಿ 1.19ರಷ್ಟು ಪಾಸಿಟಿವಿಟಿ ದರ ದಾಖಲು ವಾರದ ಅವಧಿಯಲ್ಲಿ 1.20ಲಕ್ಷ ಲಸಿಕೆ ವಿತರಣೆ
ಜಿಲ್ಲೆಯಲ್ಲಿ ಕಳೆದ ವಾರ ಶೇ.1.19ರಷ್ಟು ಪಾಸಿಟಿವಿಟಿ ದರ ಇದೆ. ಒಂದು ವಾರದಲ್ಲಿ763 ಪ್ರಕರಣಗಳು ದಾಖಲಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ವಾರದ ಅವಧಿಯಲ್ಲಿ 1.20 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಪ್ರತಿ ದಿನ 9 ಸಾವಿರ ಕೋವಿಡ್‌ ಪರೀಕ್ಷೆ ಮಾಡುತ್ತಿದ್ದು, ಪರೀಕ್ಷೆಗಳನ್ನು ಹೆಚ್ಚಿಸಬೇಕು. ಜತೆಗೆ ಅಧಿಕಾರಿಗಳು ಕೋವಿಡ್‌ 3ನೇ ಅಲೆಯ ಗಂಭೀರತೆ ಅರಿತು ಕೆಲಸ ನಿರ್ವಹಿಸಬೇಕು ಎಂದು ಬೊಮ್ಮಾಯಿ ತಿಳಿಸಿದರು.

ಚೆಕ್‌ಪೋಸ್ಟ್‌ ವ್ಯಾಪ್ತಿಯ ಹಳ್ಳಿಗರಿಗೆ ಶೀಘ್ರ ಲಸಿಕೆ ನೀಡಿ
ಜಿಲ್ಲೆಯ ಚೆಕ್‌ಪೋಸ್ಟ್‌ 10ಕಿಲೋ ಮೀಟರ್‌ ಒಳಗಿನ ಹಳ್ಳಿಗಳ ಜನರಿಗೆ ಪ್ರಾಶಸ್ತ್ಯದ ಮೇರೆಗೆ ಲಸಿಕೆ ಹಾಕಿಸುವುದು,ಕೋವಿಡ್‌ ಪರೀಕ್ಷೆ ನಡೆಸುವುದು ಸೇರಿದಂತೆ 3ನೇ ಅಲೆ ಗಂಭೀರತೆಯನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು ಗಡಿ ಸ್ಥಳಕ್ಕೆ ಡೀಸಿ, ಎಸ್‌ಪಿ, ಡಿವೈಎಸ್‌ಪಿ ಭೇಟಿ ನೀಡಿ ತಪಾಸಣೆ ನೀಡಬೇಕೇಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ದಿನಕ್ಕೆ 5 ಲಕ್ಷ ಲಸಿಕೆ ಗುರಿ
ರಾಜ್ಯಕ್ಕೆ ಪ್ರತಿ ತಿಂಗಳು 63 ರಿಂದ 65 ಲಕ್ಷ ಡೋಸ್‌ ಲಸಿಕೆ ಬರುತ್ತಿದೆ.ಕೇಂದ್ರ ಸರ್ಕಾರ ರಾಜ್ಯಕ್ಕೆ ತಿಂಗಳಿಗೆ65 ಲಕ್ಷ ಲಸಿಕೆ ನೀಡುತ್ತಿದೆ. ಆಗಸ್ಟ್‌ ತಿಂಗಳಲ್ಲಿ1 ಕೋಟಿ ನೀಡುವಂತೆ ಮನವಿ ಮಾಡಿದ್ದೇನೆ. ಮುಂದಿನ ತಿಂಗಳು 1.5 ಕೋಟಿ ನೀಡುವಂತೆ ಮನವಿ ಮಾಡುತ್ತೇನೆ.1.5 ಕೋಟಿ ಲಸಿಕೆ ನೀಡಿದರೆ ರಾಜ್ಯದಲ್ಲಿ ಪ್ರತಿದಿನ 5 ಲಕ್ಷ ಲಸಿಕೆ ನೀಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next