ಮಧುಗಿರಿ: ಮಕ್ಕಳು ವಿದ್ಯೆ ಜೊತೆ ಜೊತೆಗೆ ವಿನಯ ಮೈಗೂಡಿಸಿಕೊಂಡು ಬದುಕಿದರೆ ಅದೇ ಸಾರ್ಥಕ ಬದುಕು ಎಂದು ಡಿಡಿಪಿಐ ರವಿಶಂಕರರೆಡ್ಡಿ ಅಭಿಪ್ರಾಯಪಟ್ಟರು. ತಾಲೂಕಿನ ಕಸಬಾ ಬಸವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಂದೆ-ತಾಯಿಯ ಪಾದಪೂಜೆ ನೆರವೇರಿಸಿದ ಮಕ್ಕಳ ಕುರಿತು ಮಾತನಾಡಿದರು.
ನಾವು ಎಷ್ಟೇ ದೊಡ್ಡವರಾದರೂ ಹೆತ್ತವರಿಗೆ ಮಕ್ಕಳೇ. ಅವರು ಕಷ್ಟದಿಂದ ಬದುಕನ್ನು ಸವೆಸಿ ನಿಮ್ಮೆಲ್ಲರಿಗೂ ಶಿಕ್ಷಣ ನೀಡುತ್ತಿದ್ದಾರೆ. ಇವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಉತ್ತಮವಾಗಿ ಶಿಕ್ಷಣ ಪಡೆದರೆ ಮಾತ್ರ ಬದುಕು ಸಾರ್ಥವಾಗಲ್ಲ.
ಗುರು-ಹಿರಿಯರು ಹಾಗೂ ಹೆತ್ತವರನ್ನು ಗೌರವದಿಂದ ಕಂಡಾಗ ಮಾತ್ರ ಆ ವಿದ್ಯೆಗೆ ಸಾರ್ಥಕತೆ ಒಲಿಯಲಿದೆ. ನೀವೆಲ್ಲರೂ ತಂದೆ, ತಾಯಿ, ಗುರು ದೈವವನ್ನು ಮನದಲ್ಲಿ ನೆನೆದು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ದೇಶದ ಆಸ್ತಿಯಾಗಬೇಕೆಂದು ತಿಳಿಸಿದರು.
ಬಿಇಒ ರಂಗಯ್ಯ ಮಾತನಾಡಿ, ತಾಲೂಕಿನ ಪ್ರತಿ ಶಾಲೆಯಲ್ಲೂ ಇದೇ ಪದ್ಧತಿ ಜಾರಿಗೆ ತಂದು ಮಕ್ಕಳಲ್ಲಿ ಪೋಷಕರು ಹಾಗೂ ಗುರು ಹಿರಿಯರ ಬಗ್ಗೆ ಮೌಲ್ಯಯುತ ಭಾವನೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಈ ವೇಳೆ ಡಿವೈಪಿಸಿ ನಾಗರಾಜಪ್ಪ, ರಾಜಕುಮಾರ್, ಬಿಆರ್‌ಪಿ ನೇತ್ರಾವತಿ, ತಾಲೂಕು ಶಿಕ್ಷಕ ಸಂಘದ ನಿರ್ದೇಶಕ ವೆಂಕಟೇಶಯ್ಯ, ಶಿಕ್ಷಕರಾದ ರಮೇಶ್, ಮಂಜುನಾಥ್, ಸರಸ್ವತಮ್ಮ, ಶಾಲಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಸಿದ್ದಗಂಗಮ್ಮ ಇತರರಿದ್ದರು.