Advertisement

ಮಕ್ಕಳು ನಮ್ಮಿಂದ ನಿರೀಕ್ಷಿಸುವುದು ಪ್ರೀತಿ, ಸಮಯ

02:45 AM Nov 19, 2018 | Karthik A |

ಉಡುಪಿ: ಮಕ್ಕಳು ಹೆತ್ತವರಿಂದ ಪ್ರೀತಿ ಮತ್ತು ಅವರಿಗಾಗಿ ಒಂದಷ್ಟು ಸಮಯವನ್ನು ಮಾತ್ರವೇ ನಿರೀಕ್ಷಿಸುತ್ತಾರೆ. ಅದನ್ನು ಕೊಟ್ಟರೆ ಮಕ್ಕಳು ನಮ್ಮಿಂದ ದೂರವಾಗುವುದಿಲ್ಲ ಎಂದು ಉಡುಪಿ ಬಾಲಕಿಯರ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಸುಧಾ ಆಡುಕಳ ಅಭಿಪ್ರಾಯಪಟ್ಟರು. ರವಿವಾರದಂದು ಡಾ| ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್‌ ಎ. ಬಾಳಿಗಾ ಸಭಾಂಗಣದಲ್ಲಿ ಆಸ್ಪತ್ರೆಯ ‘ಮಕ್ಕಳ ಮಾರ್ಗದರ್ಶನ ಕೇಂದ್ರ’ದ ಆಶ್ರಯದಲ್ಲಿ ಜರಗಿದ ‘ಮಕ್ಕಳ ಹಬ್ಬ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಮೇಲೆ ನಮ್ಮ ಕನಸನ್ನು ಹೇರಬಾರದು. ಜೀವನದಲ್ಲಿ ನಮ್ಮಿಂದ ಮಾಡಲು ಅಸಾಧ್ಯವಾದುದನ್ನು ನಮ್ಮ ಮಕ್ಕಳು ಮಾಡಬೇಕು ಎಂಬ ಹಟ ತಪ್ಪು ಎಂದರು.

Advertisement

ಮೊಬೈಲ್‌ ಕೊಟ್ಟದ್ದು ನಾವೇ
‘ಮಕ್ಕಳು ಮೊಬೈಲ್‌, ಇಂಟರ್‌ನೆಟ್‌ನಲ್ಲಿ ಸಮಯ ಕಳೆಯುತ್ತಾರೆ. ಓದಿನ ಕಡೆಗೆ ಗಮನ ಕೊಡುತ್ತಿಲ್ಲ’ ಎಂಬುದಾಗಿ ಇಂದು ಅನೇಕ ಮಂದಿ ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ. ಆದರೆ ಮಕ್ಕಳ ಕೈಗೆ ಮೊಬೈಲ್‌ ಕೊಡಿಸಿದ್ದು ನಾವೇ. ಮಗು ಅತ್ತಾಗ ಅಥವಾ ಇನ್ನಿತರ ಸಂದರ್ಭಗಳಲ್ಲಿ ಸುಮ್ಮನಿರಿಸಲು ಮೊಬೈಲ್‌ ಕೊಟ್ಟು ಅಭ್ಯಾಸ ಮಾಡಿದ್ದೇವೆ. ಪೋಷಕರು ಎಷ್ಟು ಓದುತ್ತಾರೆ, ಮಕ್ಕಳಿಗೆಷ್ಟು ಸಮಯ, ಪ್ರೀತಿ ಕೊಡುತ್ತಾರೆ ಎಂಬುದು ಮುಖ್ಯ ವಾಗಿರುತ್ತದೆ. ಮಕ್ಕಳನ್ನು ಬೇರೆ ಬೇರೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದಾಗ ಅವರು ಹಾದಿ ತಪ್ಪುವುದಿಲ್ಲ ಎಂದರು.

ಸೋಲು ಎದುರಿಸಲು ಕಲಿಸಿ
ಅಧ್ಯಕ್ಷತೆ ವಹಿಸಿದ್ದ ಡಾ| ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ, ಮನೋವೈದ್ಯ ಡಾ| ಪಿ.ವಿ.ಭಂಡಾರಿ ಮಾತನಾಡಿ, ‘ಮಕ್ಕಳು ಹೇಗೆ ಗೆಲ್ಲಬೇಕು, ಸಾಧನೆ ಮಾಡಬೇಕು ಎಂಬುದನ್ನು ಎಲ್ಲ  ಹೆತ್ತವರು ಹೇಳಿಕೊಡುತ್ತಾರೆ. ಆದರೆ ಒಂದು ವೇಳೆ ಸೋಲುಂಟಾದರೆ ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ಹೇಳಿ ಕೊಡುವುದಿಲ್ಲ. ಸೋಲು ಎದುರಿಸಲು ಕಲಿಸುವುದು ಅತ್ಯಗತ್ಯ. ಸೋಲು ಕೂಡ ಜೀವನದ ಒಂದು ಅಂಗ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಎಲ್ಲ ಮಕ್ಕಳಲ್ಲಿಯೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕೇ ಹೊರತು ಮಗು ಹೀಗೆಯೇ ಆಗಬೇಕು ಎಂದು ಒತ್ತಡ ಹೇರುವುದು ಸರಿಯಲ್ಲ’ ಎಂದರು. 

ಉಡುಪಿಯ ಮಕ್ಕಳ ತಜ್ಞ ಡಾ| ವೇಣುಗೋಪಾಲ್‌ ಮುಖ್ಯ ಅತಿಥಿಯಾಗಿದ್ದರು. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ| ದೀಪಕ್‌ ಮಲ್ಯ, ಆಡಳಿತಾಧಿ ಕಾರಿ ಸೌಜನ್ಯಾ ಶೆಟ್ಟಿ ಉಪಸ್ಥಿತರಿದ್ದರು. ಧೃತಿ ಸ್ವಾಗತಿಸಿ ವಿದ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯಾ ವರದಿ ವಾಚಿಸಿದರು. ಹಮೀದ್‌ ವಂದಿಸಿದರು. ವೆನಿಶಾ, ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳಿಗೆ ಆಟೋಟ ಸ್ಪರ್ಧೆ, ಮಕ್ಕಳ ಪ್ರತಿಭಾ ಪ್ರದರ್ಶನ ಜರಗಿತು.

ಕಾರ್ಯರೂಪದ ಮಾರ್ಗದರ್ಶಕರಾಗಿ
ಪ್ರತಿಯೊಂದು ಮಗು ಕೂಡ ಹೂವಿನಂತೆ. ಅದಕ್ಕೆ ಮಾರ್ಗದರ್ಶನವೂ ಬೇಕು. ಆದರೆ ಅದರಷ್ಟಕ್ಕೆ ವಿಕಸನವಾಗುವುದಕ್ಕೂ ಅವಕಾಶ ನೀಡಬೇಕು. ಮಕ್ಕಳು ನಾವು ಮಾಡುವುದನ್ನೇ ಅನುಸರಿಸುತ್ತಾರೆ. ಹಾಗಾಗಿ ನಾವು ಮಾತಿನಲ್ಲಿ ಹೇಳುವುದಕ್ಕಿಂತ ಕಾರ್ಯರೂಪದಲ್ಲಿ ಮಾಡಿ ತೋರಿಸಬೇಕು. ಉದಾಹರಣೆಗೆ ನಾವು ನಮ್ಮಷ್ಟಕ್ಕೆ ಟಿ.ವಿ. ನೋಡುತ್ತಾ ಮಕ್ಕಳು ಓದಬೇಕು ಎಂದು ನಿರೀಕ್ಷಿಸುವುದು ಕೂಡ ತಪ್ಪು.
– ಡಾ| ವೇಣುಗೋಪಾಲ್‌, ಮಕ್ಕಳ ತಜ್ಞರು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next