Advertisement

ಭಯವಿಲ್ಲದೇ ಪರೀಕ್ಷೆ ಎದುರಿಸಲು ಮಕ್ಕಳ ಸಜ್ಜುಗೊಳಿಸಿ

03:45 PM Mar 06, 2017 | Team Udayavani |

ಚಿತ್ತಾಪುರ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕನಿಷ್ಠ ಪಕ್ಷ ಪಾಸಾಗುವ ನಿಟ್ಟಿನಲ್ಲಿ ಪಾಸಿಂಗ್‌ ಪ್ಯಾಕೇಜ್‌ ನೀಡುವುದರ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮ ಪಡಿಸುವಲ್ಲಿ ಶಿಕ್ಷಕರು ಸಾಕಷ್ಟು ಶ್ರಮವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿಹೇಳಿದರು. 

Advertisement

ಪಟ್ಟಣದ ಮಹಾದೇವಮ್ಮ ಬಿ.ಪಾಟೀಲ ಕಾಲೇಜಿನಲ್ಲಿ ವಿಶ್ವಗುರು ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಗಣಿತ ಹಾಗೂ ವಿಜ್ಞಾನ ವಿಷಯಗಳ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಪಾಸಿಂಗ್‌ ಪ್ಯಾಕೇಜ್‌ ಅನ್ನು ಎಲ್ಲ ಮಕ್ಕಳ ಮೇಲೆ ಅನ್ವಯ ಮಾಡದೇ, ಫೇಲಾಗುವ ಮಕ್ಕಳಿಗೆ ಬಳಸಿ ಶಾಲೆ ಫಲಿತಾಂಶ ಹೆಚ್ಚಿಸುವಲ್ಲಿ ಶಿಕ್ಷಕರು ಶ್ರಮವಹಿಸಬೇಕು. ಈ ಹಿಂದೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಟ್ಟಿಯಲ್ಲಿ ನೋಡಿದಾಗ ಪಟ್ಟಿಯ ಕೆಳಗಿನಿಂದ 2ನೇ ಅಥವಾ 3ನೇ ಸ್ಥಾನದಲ್ಲಿರುತಿತ್ತು. 

ಆದರೆ ಕಳೆದ ವರ್ಷ ನಮ್ಮ ಜಿಲ್ಲೆಯಲ್ಲಿನ ಫಲಿತಾಂಶ 17ನೇ ಸ್ಥಾನಕ್ಕೆ ಏರಿದೆ. ತಾಲೂಕಿನಲ್ಲಿ 3 ಶಾಲೆಗಳು ಪ್ರತಿಶತ 100ರಷ್ಟು ಫಲಿತಾಂಶ ಪಡೆದಿವೆ. ಅಲ್ಲದೇ 15ರಿಂದ 20 ಶಾಲೆಗಳು ಶೇ. 99ರಷ್ಟು ಫಲಿತಾಂಶ ತಂದಿವೆ. ಉತ್ತಮ ಫಲಿತಾಂಶಕ್ಕೆ ಶಿಕ್ಷಕರ ಪರಿಶ್ರಮವೇ ಕಾರಣ.

ಈ ವರ್ಷ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಬೇರೆ ಬೇರೆಯಾಗಿರುತ್ತವೆ. ಅದನ್ನು ಮಕ್ಕಳಿಗೆ ಮನದಟ್ಟು ಮಾಡಿಸಿ ಶಿಕ್ಷಕರು ಮಕ್ಕಳಿಗೆ ಓದುವಂತ, ಪ್ರಶ್ನೆ ಕೇಳುವಂತ ಆಸಕ್ತಿ ಹಾಗೂ ಅಭಿರುಚಿ ಬೆಳೆಸಿದಾಗ ಮಾತ್ರ ಫಲಿತಾಂಶ ಮತ್ತಷ್ಟು ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

Advertisement

ವಿಷಯ ಪರಿವೀಕ್ಷಕ ಎಸ್‌.ಪಿ. ಸುಳ್ಳದ ಮಾತನಾಡಿ, ಚಿತ್ತಾಪುರ ತಾಲೂಕು ಆರ್ಥಿಕವಾಗಿ ಬೆಳೆಯುತ್ತಿದೆ. ಮೂಲಭೂತ ಸೌಕರ್ಯಕ್ಕೆ ಕಡಿಮೆ ಇಲ್ಲ. ಉತ್ತಮ ಶಿಕ್ಷಣ ಸಂಸ್ಥೆಗಳಿವೆ. ಜೀವನ ಮಟ್ಟವೂ ಸಾಧಾರಣವಾಗಿದ್ದರೂ ಕಳೆದ ವರ್ಷ ಉತ್ತಮ ಫಲಿತಾಂಶ ಬಂದಿದೆ. ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಮಕ್ಕಳ ಕಲಿಕೆಯಿಂದ ಮಾತ್ರವೇ ಉತ್ತಮ ಫಲಿತಾಂಶ ಬರಲು ಸಾಧ್ಯ.

ಆದ್ದರಿಂದ ಫಲಿತಾಂಶ ಹೆಚ್ಚಿಗೆಗೊಳಿಸಲು ಎಲ್ಲ ಶಿಕ್ಷಕರು ವಿಷಯವನ್ನು ಸಮಗ್ರವಾಗಿ ಅರಿತು, ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಬರ್‌ ಪಟೇಲ್‌ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಕರು ಗಣನೆಗೆ ತೆಗೆದುಕೊಂಡು ಮಕ್ಕಳಿಗೆ ದಿನಕ್ಕೆ ಮೂರು ಗಂಟೆ ಸರಿಯಾದ ರೀತಿಯಲ್ಲಿ ಬೋಧನೆ ಮಾಡಬೇಕಿದೆ.

ಅದು ಕೇವಲ ಯಾಂತ್ರಿಕವಾಗಿ ನಡೆಯದೇ ಅವರಲ್ಲಿ ಆತ್ಮಸ್ಥೈರ್ಯ ತುಂಬುವಂತಿರಬೇಕು. ಮಕ್ಕಳು ಭಯವಿಲ್ಲದೇ ಪರೀಕ್ಷೆ ಎದುರಿಸುವಂತೆ ಸಜ್ಜುಗೊಳಿಸಬೇಕು ಎಂದು ಹೇಳಿದರು. ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗಿರೆಡ್ಡಿ ಕರದಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಗುರು ಶಿಕ್ಷಣ ಸಂಸ್ಥೆಯ ಪ್ರಭಾರಿ ಪ್ರಾಂಶುಪಾಲ ಖಾಜಾ ಹುಸೇನ್‌ ಇದ್ದರು.ರಮೇಶ ರಾಠೊಡ ಸ್ವಾಗತಿಸಿದರು. ಕಾಶಿರಾಯ ಕಲಾಲ ನಿರೂಪಿಸಿದರು. ಮಾರುತಿ ಚವ್ಹಾಣ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next