ಬೆಂಗಳೂರು: ಪೆನ್ನು, ಪುಸ್ತಕ ಹಿಡಿದುಕೊಂಡು ಅಕ್ಷರಾಭ್ಯಾಸ ಮಾಡಬೇಕಾದ ಕಂದಮ್ಮಗಳನ್ನು ಭಿಕ್ಷಾಟನೆಗೆ ತಳ್ಳುವ ವ್ಯವಸ್ಥಿತ ಜಾಲವು ರಾಜ್ಯಾದ್ಯಂತ ವಿಸ್ತರಿಸಿದೆ. ಕಳೆದೊಂದು ವರ್ಷದಲ್ಲಿ ಕರ್ನಾಟಕದಲ್ಲಿ 3,208 ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಿರುವುದು ಈ ಅಂಶಗಳಿಗೆ ಪುಷ್ಟಿ ನೀಡುತ್ತದೆ. ಕಠಿಣ ಕಾನೂನು ಕ್ರಮ ಜಾರಿಗೆ ತಂದರೂ ಮಕ್ಕಳ ಭಿಕ್ಷಾಟನೆಗೆ ಮುಕ್ತಿ ಸಿಕ್ಕಿಲ್ಲ.
ಕಂಕುಳಲ್ಲಿ ಇನ್ಯಾರದ್ದೊ ಮಕ್ಕಳನ್ನಿಟ್ಟು ರಾಜ್ಯದ ಪ್ರಮುಖ ನಗರಗಳ ರಸ್ತೆಬದಿ, ಟ್ರಾಫಿಕ್ ಸಿಗ್ನಲ್, ಮಾಲ್‌ಗಳು, ದೇವಾಲಯಗಳ ಮುಂದೆ ಭಿಕ್ಷೆ ಬೇಡುವ ಮಹಿಳಾ ಭಿಕ್ಷುಕರ ಕಾರು ಬಾರು ಜೋರಾಗಿದೆ. ನಾಗರಿಕರ ಅನುಕಂಪ ಗಿಟ್ಟಿಸಿಕೊಳ್ಳಲು ಮಕ್ಕಳು, ಮಹಿಳೆಯರನ್ನು ಮುಂದೆ ಬಿಟ್ಟು ಕುಳಿತಲ್ಲೇ ತಿಂಗಳಿಗೆ ಲಕ್ಷಾಂತರ ರೂ. ಗಿಟ್ಟಿಸಿಕೊಳ್ಳುವ ದಂಧೆಕೋರರ ಜಾಲ ಬೆಂಗಳೂರು ಸೇರಿ ರಾಜ್ಯದ ಇತರೆ ನಗರಗಳಲ್ಲಿ ಸಕ್ರಿಯವಾಗಿದೆ. ಅನಾಥ ಮಕ್ಕಳು, ದೇಶದ ವಿವಿಧ ಸ್ಲಂಗಳಲ್ಲಿ ಹುಟ್ಟುವ ಕಂದಮ್ಮಗಳೇ ಈ ದಂಧೆಕೋರರ ಟಾರ್ಗೆಟ್.
ಬಡ ಪಾಲಕರಿಗೆ ಕೈ ಬೆಚ್ಚನೆ ಮಾಡಿ ಮಕ್ಕಳನ್ನು ಖರೀದಿಸುವ ಖದೀಮರು, ಖಾಕಿ ಕಣ್ತಪ್ಪಿಸಲು ಬಡ ಮಹಿಳೆಯರಿಗೆ ಮಕ್ಕಳನ್ನು ಕೊಟ್ಟು ಭಿಕ್ಷಾಟನೆಗೆ ತಳ್ಳುತ್ತಿದ್ದಾರೆ. ಇನ್ನು ಜಾಲದೊಳಗೆ ಸಿಲುಕಿರುವ ಪುಟಾಣಿಗಳಿಗೆ ಮತ್ತು ಬರುವ ಔಷಧಿ ನೀಡಿ ಸದಾ ನಿದ್ದೆಯಲ್ಲಿರುವಂತೆ ಬಿಂಬಿಸುತ್ತಿರುವ ದೃಶ್ಯ ಪ್ರಮುಖ ಸಿಗ್ನಲ್‌ಗಳಲ್ಲಿ ಆಗಾಗ ಕಾಣಸಿಗುತ್ತವೆ. ರಾಜಧಾನಿಯಲ್ಲೇ ಅಪ್ರಾಪ್ತ ಭಿಕ್ಷುಕರು ಹೆಚ್ಚು: ರಾಜ್ಯ ರಾಜಧಾನಿಯಲ್ಲಿ 18 ವರ್ಷದೊಳಗಿನ ಭಿಕ್ಷುಕರ ಪ್ರಮಾಣ ಅತ್ಯಧಿಕವಾಗಿದೆ. ಮೈಸೂರು ಎರಡನೇ ಸ್ಥಾನದಲ್ಲಿದೆ. ಕ್ರಮವಾಗಿ ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಢ, ಕೋಲಾರ, ವಿಜಯಪುರ ನಂತರದ ಸ್ಥಾನಗಳಲ್ಲಿವೆ. ಇನ್ನು ಬೆಂಗಳೂರು ಸೇರಿದಂತೆ 14 ಜಿಲ್ಲೆಗಳಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳಿವೆ. ಸದ್ಯ ಈ ಕೇಂದ್ರಗಳಲ್ಲಿ 3,416 ಭಿಕ್ಷುಕರು ಆಶ್ರಯ ಕಂಡುಕೊಂಡಿದ್ದಾರೆ.
ಈ ಪೈಕಿ 2,979 ಮಕ್ಕಳು ಹಾಗೂ ಪುರುಷರಿದ್ದರೆ, 437 ಮಹಿಳೆಯರಿದ್ದಾರೆ. ಸಿಕ್ಕಿಬಿದ್ದ ಮಹಿಳಾ ಭಿಕ್ಷುಕಿಯರ ಜೊತೆಗೆ ಅಂದಾಜು ಶೇ.30ರಷ್ಟು ಬೇರೆಯವರ ಮಕ್ಕಳಿರುವುದು ಪತ್ತೆಯಾಗಿದೆ. ಅನಧಿಕೃತವಾಗಿ ದೊಡ್ಡ ಪ್ರಮಾಣದಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕೆಲ ಎನ್ ಜಿಓಗಳು “ಉದಯವಾಣಿ’ಗೆ ತಿಳಿಸಿವೆ.
ಕಾನೂನು ಏನು ಹೇಳುತ್ತದೆ ?: ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರ ಸೆಕ್ಷನ್ 3ರನ್ವಯ ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧಿಸಲಾಗಿದೆ. 16 ವರ್ಷ ಮೇಲ್ಪಟ್ಟ ಪುರುಷರು ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆಯರು ಭಿಕ್ಷೆ ಬೇಡಿ ಸಿಕ್ಕಿಬಿದ್ದರೆ ಪೊಲೀಸರು ಬಂಧಿಸಿ ನಿರಾಶ್ರಿತ ಕೇಂದ್ರಗಳಿಗೆ ಹಸ್ತಾಂತರಿಸುತ್ತಾರೆ. ಆದರೆ, 16 ವರ್ಷಕ್ಕಿಂತ ಕೆಳಗಿನ ಗಂಡು ಮಕ್ಕಳು, 18ರ ಒಳಗಿನ ಹೆಣ್ಣು ಮಕ್ಕಳನ್ನು ಬಂಧಿಸುವಂತಿಲ್ಲ. ಭಿಕ್ಷುಕ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿಯ ವಶಕ್ಕೆ ನೀಡಿ ಆರೈಕೆ ಮಾಡಲಾಗುತ್ತಿದೆ.
ಭಿಕ್ಷಾಟನೆಯ ಹಿಂದಿದೆ ಕರಾಳ ಕತೆ : ದಲ್ಲಾಳಿಗಳು ಸ್ಲಂಗಳಲ್ಲಿರುವ ಹಸುಗೂಸು ಹಾಗೂ ಅಂಗವಿಕಲ ಮಕ್ಕಳನ್ನು ಬಾಡಿಗೆಗೆ ಪಡೆದು ಭಿಕ್ಷಾಟನೆಗೆ ಬಿಡುತ್ತಾರೆ. ಭಿಕ್ಷೆ ಬೇಡಿ ಬರುವ ದುಡ್ಡಿನಲ್ಲಿ ಬಡ ಮಕ್ಕಳ ಪಾಲಕರಿಗೆ ಕಮೀಷನ್ ಹೋಗುತ್ತದೆ. ಈ ಜಾಲದ ರೂವಾರಿಗಳು ಪುಟ್ಟ ಮಕ್ಕಳಿಗೆ ಭಿಕ್ಷಾಟನೆಯ ತರಬೇತಿ ನೀಡಿದರೆ, 14 ವರ್ಷ ಮೇಲ್ಪಟ್ಟ ಮಕ್ಕಳನ್ನು ಡ್ರಗ್ಸ್ ಮಾರಾಟ, ವೈಶಾವಾಟಿಕೆಗಳೂ ಬಳಸುತ್ತಿರುವ ಗಂಭೀರ ಆರೋಪಗಳಿವೆ. ಇದರ ಹಿಂದೆ ಮಕ್ಕಳ ಕಳ್ಳರ ಜಾಲವೂ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ.
ಭಿಕ್ಷಾಟನೆ ದಂಧೆ ನಡೆಸುವುದು ಕಂಡು ಬಂದರೆ ಕಾನೂನು ರೀತಿ ಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗೆ ಭಿಕ್ಷುಕರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಸಹಕಾರ ನೀಡಲಿದೆ.
–ಬಿ.ದಯಾನಂದ್, ಪೊಲೀಸ್ ಆಯುಕ್ತರು, ಬೆಂಗಳೂರು.
–ಅವಿನಾಶ ಮೂಡಂಬಿಕಾನ